ಸೋಮವಾರಪೇಟೆ, ಡಿ. 16: ರಾಜ್ಯ-ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳ ನಾಯಕರ ಕಿತ್ತಾಟಕ್ಕಿಂತಲೂ ಒಂದು ಪಟ್ಟು ಹೆಚ್ಚು ಎನ್ನವಂತಿದೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಪ್ರಸಕ್ತ ಸಾಲಿನ ಆಡಳಿತ ಮಂಡಳಿ. ಪಟ್ಟಣದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕೆಲ ಸದಸ್ಯರು ‘ಜನಪ್ರತಿನಿಧಿ’ ಎಂಬ ಜವಾಬ್ದಾರಿ ಯನ್ನೂ ಮರೆತು ವರ್ತಿಸುತ್ತಿರುವದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಎಂಬಂತಾಗಿದೆ. ಪರಿಣಾಮ ಸದಸ್ಯರ ಬಗ್ಗೆ ಸಾರ್ವಜನಿಕರ ಸದಭಿಪ್ರಾಯ ಮರೆಯಾಗುತ್ತಿದ್ದು, ಪ.ಪಂ. ಎಂದರೆ ಮೂಗುಮುರಿಯುತ್ತಿದ್ದಾರೆ.ಇದಕ್ಕೆ ಪೂರಕ ಎಂಬಂತೆ ಇಂದು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ನಡೆಸಿದ ಹೈಡ್ರಾಮ. ಸಭೆಗೆ ನೋಟೀಸ್ 7 ದಿನಗಳ ಮೊದಲೇ ತಲುಪಿಲ್ಲ ಎಂಬ ಕಾರಣ ನೀಡಿ ಇಂದಿನ ಸಭೆಯನ್ನು ಬಹಿಷ್ಕರಿಸಿದ ಪರಿ ನಿಜಕ್ಕೂ ಪ.ಪಂ. ಅಭಿವೃದ್ಧಿಯ ಬಗ್ಗೆ ಇವರಿಗಿರುವ ಕಾಳಜಿಯನ್ನು ಎತ್ತಿ ತೋರಿಸಿತು.

ಸಭೆಯ ಬಗ್ಗೆ ಸಂಜೆ 7 ಗಂಟೆಗೆ ನಮಗೆ ನೋಟೀಸ್ ನೀಡಿದ್ದಾರೆ ಎಂದು ಆರೋಪಿಸುವ ಇದೇ ಸದಸ್ಯರುಗಳು ವಾರದ ಹಲವು ದಿನಗಳಲ್ಲಿ ಸಂಜೆ 7 ಗಂಟೆಯವರೆಗೂ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕುಳಿತು ಅದೇನು ಅಭಿವೃದ್ಧಿಯ ಬಗ್ಗೆ ಚರ್ಚಿಸುತ್ತಾರೋ? ಅದ್ಯಾವ ಸಮಸ್ಯೆಯನ್ನು ಬಗೆಹರಿಸುತ್ತಾರೋ? ಬೇರೇನಾದರೂ ಮಾಡುತ್ತಾರೋ? ಅವರೇ ತಿಳಿಸಬೇಕು. ಕ್ಷುಲ್ಲಕ ಕಾರಣ ನೀಡಿ ಸಭೆಯನ್ನು ಬಹಿಷ್ಕರಿಸುವ ಕಾಂಗ್ರೆಸ್ ಸೇರಿದಂತೆ ಬಿಜೆಪಿ ಪಕ್ಷದ ಇಂತಹ ಸದಸ್ಯರಿಂದ ಪಟ್ಟಣ ಅಭಿವೃದ್ಧಿ ಯಾದಂತೆಯೇ.

(ಮೊದಲ ಪುಟದಿಂದ) ಸಭೆಯ ನೋಟೀಸ್ ಸ್ವೀಕರಿಸಲು ಕಚೇರಿಯ ಸಮಯ ನೆಪವೊಡ್ಡುವ ಕೆಲ ಜನಪ್ರತಿನಿಧಿಗಳು ಅದೇ ಕಚೇರಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕುಳಿತು ಅದ್ಯಾವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರುತ್ತಾರೋ ಗೊತ್ತಿಲ್ಲ. ಸಾಮಾನ್ಯ ಸಭೆಗಳಲ್ಲಿ ಪಟ್ಟಣದ ಜನತೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವದು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವದನ್ನು ಬಿಟ್ಟು, ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ವಿಪಕ್ಷಗಳ ಜನಪ್ರತಿನಿಧಿಗಳು ಗೈರಾಗುವ ಮೂಲಕ ತಮ್ಮ ನಿಜವಾದ ‘ಜನಪರ ಕಾಳಜಿ’ ತೋರ್ಪಡಿಸುತ್ತಿದ್ದಾರೆ.

ಅದರಲ್ಲೂ ಒಂದು ಹೆಜ್ಜೆ ಮುಂದಡಿಯಿಟ್ಟಿರುವ ಆಡಳಿತ ಪಕ್ಷ ಬಿಜೆಪಿಯ ಕೆಲ ಸದಸ್ಯರು ಇಂದಿನ ಸಭೆಗೆ ಗೈರು ಹಾಜರಾಗುವ ಮೂಲಕ ಜನಪರ ಕಾಳಜಿ ತೋರ್ಪಡಿಸಿದ್ದರೆ, ಕಾಂಗ್ರೆಸ್ ಸದಸ್ಯರು ಸಭಾಂಗಣದ ಒಳಗೆ ಆಗಮಿಸದೇ ಬಾಗಿಲ ಬಳಿನಿಂತು ‘ಶಿವಪ್ಪ ಕಾಯೋ ತಂದೆ’ ಹಾಡನ್ನು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಹೆಸರಿನೊಂದಿಗೆ ತಳುಕು ಹಾಕಿ ‘ನಾಚಪ್ಪ ಕಾಯೋ ತಂದೆ’ ಎಂದು ಅನರ್ಥಕಾರಿ ಹಾಡು ಹೇಳಿ ವಾಪಸ್ಸಾದರು.

ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಇಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಭೆಗೆ ಉಪಾಧ್ಯಕ್ಷ ರಮೇಶ್ ಶೆಟ್ಟಿ ಸೇರಿದಂತೆ ಬಿಜೆಪಿ ಪಕ್ಷದ ಲೀಲಾ ನಿರ್ವಾಣಿ, ಸುಷ್ಮಾ, ಈಶ್ವರ್, ಕಾಂಗ್ರೆಸ್‍ನ ವೆಂಕಟೇಶ್ ಅವರುಗಳು ಗೈರು ಹಾಜರಾಗಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್‍ನ ಕೆ.ಎ. ಆದಂ, ಶೀಲಾ ಡಿಸೋಜ, ಮೀನಾಕುಮಾರಿ ಸೇರಿದಂತೆ ನಾಮನಿರ್ದೇಶಿತ ಸದಸ್ಯರಾದ ಇಂದ್ರೇಶ್, ನಾಗರಾಜು ಅವರುಗಳು ಸಭೆ ಆಯೋಜನೆಗೊಂಡಿದ್ದ ಸಭಾಂಗಣದ ಬಾಗಿಲ ಬಳಿ ಬಂದು ‘ನಾಚಪ್ಪ ಕಾಯೋ ತಂದೆ’ ಎಂದು ಹಾಡು ಹೇಳಿ ಹೊರ ನಡೆದರು.

ಇತ್ತ ಸಭಾಂಗಣದ ಒಳಗೆ ಅಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯ ಬಿ.ಎಂ. ಸುರೇಶ್ ಅವರುಗಳು ಆಸೀನರಾಗಿದ್ದರು. ಕಾಂಗ್ರೆಸ್ ಸದಸ್ಯರ ದಿಢೀರ್ ಹಾಡಿನಿಂದ ಕೆರಳಿದ ಸದಸ್ಯ ಸುರೇಶ್ ‘ಭಿಕ್ಷೆ ಬೇಡೋಕೆ ಬಂದಿದ್ದಾರೆ. ಚಿಲ್ಲರೆ ದುಡ್ಡು ಕೊಟ್ಟು ಕಳುಹಿಸಿ, ಇಂತಹವರಿಂದಲೇ ಕಾಂಗ್ರೆಸ್ ಪಕ್ಷ ಅಧೋಗತಿಗೆ ತಲಪುತ್ತಿದೆ. ಇವ್ರಿಗೆ ಪಟ್ಟಣ ಪಂಚಾಯಿತಿ ಜನತೆಯ ಅಭಿವೃದ್ಧಿ ಬೇಕಿಲ್ಲ. ಸ್ವಾರ್ಥ ಸಾಧನೆಗಾಗಿ ಹೀಗೆಲ್ಲಾ ನಾಟಕ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 11 ರಲ್ಲಿ ಒಂದೂ ಸ್ಥಾನ ಬರೋದಿಲ್ಲ. ಇವ್ರÀ ಕಾಟ ಜಾಸ್ತಿ ಆಯ್ತು. ಜನ್ರಿಗೆ ಎಲ್ಲಾ ಗೊತ್ತಿದೆ, ಮೇಟಿದು ಹಗರಣದಲ್ಲಿ ಮಾನ ಕಳ್ಕೊಂಡಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

ಈ ಸಂದರ್ಭ ಎದ್ದು ನಿಂತ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ‘ಕಳೆದ ತಾ.9 ರಂದೇ ಎಲ್ಲಾ ಸದಸ್ಯರಿಗೂ ಮೀಟಿಂಗ್ ನೋಟೀಸ್ ನೀಡಲಾಗಿದೆ. ನಿಯಮದ ಪ್ರಕಾರ 7 ದಿನಗಳ ಒಳಗೆ ನೋಟೀಸ್ ನೀಡಿದ್ದೇವೆ. ಇದರಲ್ಲಿ ಕೆಲವರು ಉದ್ದೇಶಪೂರ್ವಕವಾಗಿಯೇ ಸಭೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ನಗರೋತ್ಥಾನ 3ನೇ ಹಂತದ ಯೋಜನೆಯಡಿ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಬಗ್ಗೆ ಕ್ರಿಯಾಯೋಜನೆ ತಯಾರಿಸುವ ನಿಟ್ಟಿನಲ್ಲಿ ಇಂದು ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿರುವದು ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ’ ಎಂದರು.

‘ಈ ಹಿಂದೆ ನಗರೋತ್ಥಾನ ಯೋಜನೆಯಡಿ ಶಾಸಕರ ಅಧ್ಯಕ್ಷತೆಯಲ್ಲಿಯೇ ಕ್ರಿಯಾಯೋಜನೆ ತಯಾರಾಗುತ್ತಿತ್ತು. ಇದನ್ನು ಬದಲಿಸಿ ಎಲ್ಲಾ ಸದಸ್ಯರಿಗೂ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅವರವರ ವಾರ್ಡ್‍ಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಪಟ್ಟಿ ಮಾಡಲು ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಇವರುಗಳು ಆಗಮಿಸದೇ ಅನರ್ಥಕಾರಿ ಹಾಡು ಹೇಳಿ ಹೋಗಿದ್ದಾರೆ. 6 ದಿನಗಳಿಗೆ ನೋಟೀಸ್ ನೀಡಿದ್ದರೆ ಸಭೆಯಲ್ಲಿ ಪ್ರಸ್ತಾಪಿಸಿ ಈ ಬಗ್ಗೆ ಅವರ ಖಂಡನೆ ದಾಖಲಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕಿತ್ತು. ಇದನ್ನು ಬಿಟ್ಟು ಸ್ವಾರ್ಥ ಸಾಧನೆಗೆ ಹೀಗೆಲ್ಲಾ ಮಾಡ್ತಿದ್ದಾರೆ’ ಎಂದು ವಿಜಯಲಕ್ಷ್ಮಿ ಅವರು ಕಿಡಿಕಾರಿದರು.

‘ಟೆಂಡರ್ ಕಾಮಗಾರಿಗಳನ್ನು ಅಧ್ಯಕ್ಷರು ವೀಕ್ಷಿಸಬಾರದು. ಇವರು ನೀಡೋ ಬಿಲ್‍ಗಳಿಗೆ ಕಣ್ಮುಚ್ಚಿ ಸಹಿ ಹಾಕಬೇಕು. ಹಾಗಾದ್ರೆ ಮಾತ್ರ ಎಲ್ಲಾ ಮೀಟಿಂಗ್‍ಗೂ ಬರ್ತಾರೆ’ ಎಂದು ಕುಟುಕಿದ ಅಧ್ಯಕ್ಷರು, ‘ಮುಂದಿನ ದಿನಗಳಲ್ಲೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡ್ತೀವಿ, 2 ಕೋಟಿ ವೆಚ್ಚದ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಶಾಸಕರ ಉಪಸ್ಥಿತಿಯಲ್ಲೇ ಕ್ರಿಯಾಯೋಜನೆ ತಯಾರಿಸ್ತೀವಿ’ ಎಂದು ಹೇಳಿದರು.

ನಂತರ ಕೋರಂ ಕೊರತೆಯಿಂದ ಸಭೆಯನ್ನು ಮುಂದೂಡಲಾಯಿತು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಇಂಜಿನಿಯರ್ ವೀರೇಂದ್ರ, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸದಸ್ಯರ ಗರಂ : ವಿಜಯಲಕ್ಷ್ಮಿ ಸುರೇಶ್ ಅವರು ಬಿಜೆಪಿ ಪಕ್ಷ ಸೇರ್ಪಡೆಗೊಂಡು ಪಂಚಾಯಿತಿ ಅಧ್ಯಕ್ಷೆಯಾದ ನಂತರ ಬಿಜೆಪಿ ಸದಸ್ಯರೂ ಸೇರಿದಂತೆ ಕಾಂಗ್ರೆಸ್‍ನ ಕೆಲವು ಸದಸ್ಯರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ನೇರ ನುಡಿಯ ಅಧ್ಯಕ್ಷೆ ಯಾರ ಮಾತೂ ಕೇಳುವದಿಲ್ಲ. ಸಣ್ಣಪುಟ್ಟ ಅಡ್ಜಸ್ಟ್‍ಮೆಂಟ್‍ಗಳಿಗೂ ಬಗ್ಗುವದಿಲ್ಲ ಎಂಬ ಆರೋಪ ಬಹುತೇಕ ಸದಸ್ಯರದ್ದು. ಇದಕ್ಕೆ ಪೂರಕವೆಂಬಂತೆ ವಿಜಯಲಕ್ಷ್ಮಿ ಅವರು ‘ಕಾಮಗಾರಿಗೆ ಬಿಲ್ ಮಾಡೋವಾಗ ಕೆಲಸ ನೋಡಿನೇ ಸೈನ್ ಮಾಡ್ತೀನಿ;ಕಣ್ಮುಚ್ಚಿ ಸೈನ್ ಹಾಕೋಕೆ ನನಗಾಗಲ್ಲ, ಇದು ಕೆಲವರಿಗೆ ಆಗಲ್ಲ. ಪಂಚಾಯಿತಿಯಲ್ಲಿ ಹಣ ದುರುಪಯೋಗ ತಡೆಯಲು ನಿರ್ದಾಕ್ಷಿಣ್ಯ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಕೆಲ ಸದಸ್ಯರು ತನಗೆ ಸಹಕಾರ ನೀಡುತ್ತಿಲ್ಲ’ ಎಂದು ದೂರಿದ್ದಾರೆ.

ಒಟ್ಟಾರೆ ಜನತೆಯ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿ ಕಾಮಗಾರಿಗಳು, ವಿನೂತನ ಯೋಜನೆಗಳಿಗೆ ತೆರೆದುಕೊಳ್ಳಬೇಕಿದ್ದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯರೊಳಗಿನ ಭಿನ್ನಾಭಿಪ್ರಾಯ, ಒಣ ಪ್ರತಿಷ್ಠೆಗೆ ಬಲಿಯಾಗುತ್ತಿರುವದು ದುರಂತ. ಜನತೆ ಈ ಬಗ್ಗೆ ಜಾಗೃತರಾಗಿದ್ದು ಪಂಚಾಯಿತಿಯ ಕಾರ್ಯಗಳ ಬಗ್ಗೆ ಗಮನ ಹರಿಸಬೇಕಿದೆ. ತಾವು ಆರಿಸಿ ಕಳುಹಿಸಿದ ಜನಪ್ರತಿನಿಧಿ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಿದೆ.

- ವಿಜಯ್ ಹಾನಗಲ್