ರೂ. 42.99 ಲಕ್ಷ ನಿವ್ವಳ ಲಾಭ

ಗೋಣಿಕೊಪ್ಪಲು, ಅ. 23: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದು, ಇದೀಗ ವಾರ್ಷಿಕ ರೂ. 90 ಕೋಟಿ ವಹಿವಾಟು ನಡೆಸುತ್ತಿದೆ. ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಮೆಚ್ಚುಗೆಗೆ ಪಾತ್ರವಾಗಿ, ಉತ್ತೇಜನವಾಗಿ ರೂ. 50 ಸಾವಿರ ಸಹಾಯ ಧನ ನೀಡಿರುವ ಕುರಿತು ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ರಾಮಕೃಷ್ಣ ತಿಳಿಸಿದ್ದಾರೆ.

ಪ್ರಸ್ತುತ ಸಾಲಿನ ಆರ್ಥಿಕ ವರ್ಷದಲ್ಲಿ ಸಂಘವು ರೂ. 42,99,097.20 ನಿವ್ವಳ ಲಾಭಗಳಿಸಿದ್ದು, ಸಾಲ ವಸೂಲಾತಿಯಲ್ಲಿಯೂ ಶೇ. 100 ಸಾಧನೆ ಮಾಡಿರುವದಾಗಿ ಹೇಳಿದರು. ಸಂಘದಲ್ಲಿ 1291 ಸದಸ್ಯರಿದ್ದು, ಷೇರು ಬಂಡವಾಳ ರೂ. 90 ಲಕ್ಷ, ಕ್ಷೇಮ ನಿಧಿ ರೂ. 1.50 ಕೋಟಿ, ಕೃಷಿ ಮತ್ತು ಕೃಷಿಯೇತರ ಸಾಲಗಳಾಗಿ ರೂ. 12.78 ಕೋಟಿ ನೀಡಲಾಗಿದ್ದು, ರೂ. 3.68 ಕೋಟಿ ಹೂಡಿಕೆ ಬಂಡವಾಳವಲ್ಲದೆ, ದುಡಿಯುವ ಬಂಡವಾಳ ರೂ. 16.73 ಕೋಟಿ ಇದೆ. ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.

ರಸಗೊಬ್ಬರ ಮತ್ತು ಕೃಷಿ ಸಲಕರಣೆ ವಿಭಾಗವಿದ್ದು, ದಶಕಗಳಿಂದ ತಿತಿಮತಿ ಬ್ಯಾಂಕ್ ಆಡಿಟ್‍ನ ‘ಎ’ ತರಗತಿಯಲ್ಲಿ ಮುಂದುವರಿದಿದೆ. ಶಾಸಕ ಬೋಪಯ್ಯ ಅವರ ನಿಧಿಯಿಂದ ಆವರಣ ಕಾಂಕ್ರೀಟ್ ರಸ್ತೆ ಮತ್ತು ಶೌಚಾಲಯ ಕಾಮಗಾರಿ ರೂ. 2 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಮರೂರು ಜಾಗದಲ್ಲಿ ಸುಮಾರು ರೂ. 22 ಲಕ್ಷ ವೆಚ್ಚದ ಎಪಿಎಂಸಿ ಅನುದಾನದಲ್ಲಿ 10 ಸೆಂಟ್ ನಿವೇಶನದಲ್ಲಿ ಗ್ರಾಮೀಣ ಗೋದಾಮು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 1 ಏಕರೆಯಲ್ಲಿ ಕೆರೆ ನಿರ್ಮಾಣ, ಎರಡು ಏಕರೆಯಲ್ಲಿ ಸಿಲ್ವರ್ ಗಿಡ ಬೆಳೆಯಲಾಗಿದೆ. ಒಟ್ಟು 4 ಏಕರೆ ಜಾಗವಿದ್ದು, ಕೃಷಿ ಪ್ರಾಂಗಣವನ್ನೂ ಒಳಗೊಂಡಿದೆ. ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವ ಆಚರಿಸುತ್ತಿದ್ದು, ಸದರಿ ಬ್ಯಾಂಕ್ ಕೃಷಿಕರಿಗೆ ತನ್ನದೆ ವಿನೂತನ ಕೊಡುಗೆ ನೀಡಲಿದೆ. ತಿತಿಮತಿ ಶಾಲಾ ವ್ಯಾಪ್ತಿಯಲ್ಲಿ ಮುಖ್ಯರಸ್ತೆಯ ಸನಿಹ ಎಚ್ಚರಿಕೆ ಫಲಕ ಅಳವಡಿಕೆ, ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ, ರಾಮಮಂದಿರ ಹಾಗೂ ಹಲವು ಶಾಲೆಗಳಿಗೆ ಕುರ್ಚಿ ಮತ್ತು ಗೋದ್ರೆಜ್ ಕಪಾಟು ವಿತರಣೆ, ಸಹಕಾರ ಸಪ್ತಾಹದ ಅಂಗವಾಗಿ ತಿತಿಮತಿ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ, ಕ್ಷೇತ್ರದಲ್ಲಿ ವಿದ್ಯಾಭಿವೃದ್ಧಿ ನಿಧಿ ಸ್ಥಾಪನೆ, ಕ್ಲಸ್ಟರ್ ಮಟ್ಟದ ಶಾಲೆಗಳಿಗೆ ಧ್ವನಿವರ್ಧಕ ವಿತರಣೆ, ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಶಾಲೆಯನ್ನು ಪ್ರತಿನಿಧಿಸಿ ಕ್ರೀಡೆಯಲ್ಲಿ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಕಳೆದ 4 ವರ್ಷದಿಂದ ಪೆÇ್ರೀತ್ಸಾಹ ಧನ ವಿತರಣೆ ಇತ್ಯಾದಿ ಸಾಮಾಜಿಕ ಕಳಕಳಿಯ ಕಾರ್ಯಗಳನ್ನೂ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಈ ಬಾರಿಯ ಮಹಾಸಭೆ ಸಂದರ್ಭ ಸಂಘದ ಸ್ಥಾಪಕ ಅಧ್ಯಕ್ಷ ದಿ. ಮನೆಯಪಂಡ ಎನ್. ಗಣಪತಿ ಅವರ ಭಾವಚಿತ್ರವನ್ನು ಸಭಾಂಗಣದಲ್ಲಿ ಅನಾವರಣಗೊಳಿಸಲಾಗಿದೆ. ದೇವರಪುರದಲ್ಲಿಯೂ ಬ್ಯಾಂಕ್ ಶಾಖೆ ಅಭಿವೃದ್ಧಿ ಹೊಂದುತ್ತಿರುವದಾಗಿ ನುಡಿದರು. ಸಂಘದ ಸದಸ್ಯರು ವಾಹಿದೆ ಮೀರಿದ ಯಾವದೇ ಸಾಲವನ್ನು ಉಳಿಸಿಕೊಳ್ಳದಿರುವದು, ಪ್ರಾಮಾಣಿಕ ಸಾಲ ಪಾವತಿಯಿಂದಾಗಿ ಬ್ಯಾಂಕ್ ವಾರ್ಷಿಕವಾಗಿ ಲಾಭದಾಯಕ ವಹಿವಾಟು ನಡೆಸುತ್ತಿದೆ ಎಂದು ಹೇಳಿದರು. ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಪಾಲೇಂಗಡ ಜೆ. ಮನು ನಂಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಸ್. ಸುಬ್ರಮಣಿ ಮತ್ತು ಸಿಬ್ಬಂದಿ ವರ್ಗ, ನಿರ್ದೇಶಕರ ಪೂರಕ ಸಹಕಾರದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವದಾಗಿ ಅಧ್ಯಕ್ಷ ಚೆಪ್ಪುಡಿರ ಎಂ. ರಾಮಕೃಷ್ಣ ಅವರು ‘ಶಕ್ತಿ’ಯೊಂದಿಗೆ ಮಾಹಿತಿ ಹಂಚಿಕೊಂಡರು. - ಟಿ.ಎಲ್. ಶ್ರೀನಿವಾಸ್