ಸುಂಟಿಕೊಪ್ಪ, ಜು. 13: ಕರ್ನಾಟಕ ರಾಜ್ಯದ ಅಭಿವೃದ್ಧಿಯ ಹರಿಕಾರ, ಮೀಸಲಾತಿ ನೀತಿಯಿಂದ ಸರಕಾರಿ ಕೆಲಸದಲ್ಲಿ ಪರಿಶಿಷ್ಟ ಜಾತಿ, ಪಂಗಡವರು, ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಅವಕಾಶ ಕಲ್ಪಿಸಿದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಆಗಿದ್ದರು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಬಣ್ಣಿಸಿದರು.
ಇಲ್ಲಿನ ಗದ್ದೆಹಳ್ಳದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿಗಳಿಗೆ ದೇವರಾಜು ಅರಸು ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಉಚಿತ ನೋಟ್ ಪುಸ್ತಕವನ್ನು ವಿತರಿಸಿ ಮಾತನಾಡಿದ ಅವರು, ಇಂದು ಸರಕಾರದ ವಿದ್ಯಾರ್ಥಿ ನಿಲಯಗಳಲ್ಲಿ ಬಡ ಮಕ್ಕಳು ನೆಲೆಸಿ ವಿದ್ಯೆ ಪಡೆಯಲು ದೇವರಾಜ ಅರಸು ಕಾರಣಕರ್ತರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಸರಕಾರ ನಡೆಸುತ್ತಿರುವ ಹಾಸ್ಟೆಲ್ನಲ್ಲಿ ಸಾಕಷ್ಟು ಹಗರಣ ನಡೆಯುತ್ತಿದೆ. ಇತ್ತೀಚೆಗೆ ತಾನೊಂದು ಹಾಸ್ಟೆಲ್ಗೆ ಭೇಟಿ ನೀಡಿದಾಗ ಹುಳ ಇರುವ ಬೇಳೆಯನ್ನು ಸೋಸಿ ವಿದ್ಯಾರ್ಥಿಗಳಿಗೆ ಸಾಂಬಾರು ಮಾಡಿ ಕೊಡುತ್ತಿರುವದು ಕಂಡು ನೋವಾಯಿತು.
ಇನ್ನು ಮುಂದೆ ಹುಳವಿರುವ ಬೇಳೆ, ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಡಿ ಎಂದು ಎಚ್ಚರಿಸಿರುವದಾಗಿ ಹೇಳಿದರು. ಆದರೆ ಇಲ್ಲಿನ ಹಾಸ್ಟೆಲ್ ಕೊಡಗು ಜಿಲ್ಲೆಯಲ್ಲೇ ಅತ್ಯುತ್ತಮ ಹಾಸ್ಟೆಲ್ ಆಗಿದೆ. ಗುಣಮಟ್ಟ ಕಾಪಾಡಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ ಮಾತನಾಡಿ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ವಿಧೇಯರಾಗಿ ಸುಳ್ಳು ಮಾತುಗಳನ್ನಾಡದೇ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು ಎಂದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಮಾತನಾಡಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಸಿಗುವಂತಾಗಬೇಕು. ಮಕ್ಕಳು ಅರ್ಧದಲ್ಲೇ ಹಾಸ್ಟೆಲ್ ಬಿಡುವದು ಆಗಬಾರದು ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಹಾಸ್ಟೆಲ್ ಮೇಲ್ವಿಚಾರಕ ಸ್ವಾಮಿ, ಅಡುಗೆ ಸಹಾಯಕಿ ಆರ್.ಎಸ್. ವಸಂತಿ, ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನ, ನಿಲಯದ ಸಿಬ್ಬಂದಿ ಎಂ.ಎ. ಸತೀಶ್ ಇದ್ದರು.