ಸುಂಟಿಕೊಪ್ಪ, ಜ. 31: ಗ್ರಾಮ ಪಂಚಾಯಿತಿ ವತಿಯಿಂದ ತಡೆಗೋಡೆ ನಿರ್ಮಿಸಲು ಅನುಮತಿ ನೀಡಲಾಗಿದ್ದು, ಕೆಲಸ ಪೂರ್ಣವಾಗದೇ ಬಿಲ್ ಪಾವತಿ ಮಾಡಲಾಗಿದೆ. ವಿಕ್ರಂ ಬಡಾವಣೆಯ ರಸ್ತೆ ಬಿರುಕು ಬಿಟ್ಟಿದ್ದು, ಜನಸಾಮಾನ್ಯರು ನಡೆದಾಡಲು ಆಗದಂತಾಗಿದೆ. ಖಾಸಗಿ ರೆಸಾರ್ಟ್‍ಗೆ ತೆರಳುವ ರಸ್ತೆ ಕಾಮಗಾರಿ ಪಂಚಾಯಿತಿ ವತಿಯಿಂದ ನಿರ್ಮಿಸ ಲಾಗಿದೆ. ಈ ಭಾಗದ ಹಲವಾರು ರಸ್ತೆಗಳು ಹದಗೆಟ್ಟಿದೆ ಎಂದು ಕೆದಕಲ್ ಗ್ರಾಮ ಪಂಚಾಯಿತಿಯ 2ನೇ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವಿಕ್ರಂ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದೆ. ಬಡಾವಣೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಬಂದಿದೆ. ಮೋರಿಯ ನೀರು ನಿಂತು ಗಬ್ಬು ನಾರುತ್ತಿದೆ. ಈ ಬಗ್ಗೆ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಿ ಎಂದು ಗ್ರಾಮಸ್ಥರಾದ ರೋನಾಲ್ಡ್, ಗಿರೀಶ್ ಆಗ್ರಹಿಸಿದರು.
ಖಾಸಗಿ ರೆಸಾರ್ಟ್‍ಗೆ ತೆರಳುವ ರಸ್ತೆಯನ್ನು ಪಂಚಾಯಿತಿ ಅನುದಾನದಿಂದ ನಿರ್ಮಿಸಲಾಗಿದೆ. ಆದರೆ ಜೇನುಕಾಡು ಹಾಗೂ 50 ವರ್ಷದಿಂದ ಇಲ್ಲಿ ತೋಟ ನಿರ್ಮಿಸಿಕೊಂಡವರಿಗೆ ರಸ್ತೆ ನಿರ್ಮಿಸಿಕೊಡಲಿಲ್ಲ ಎಂದು ಗ್ರಾಮಸ್ಥ ಹಾಗೂ ಯೂತ್ ಫೆಡರೇಶನ್ ಕ್ಲಬ್‍ನ ಮಾಜಿ ಅಧ್ಯಕ್ಷ ಗಿರೀಶ್ ಹಾಗೂ ಕನೀಶ್ ಪ್ರಶ್ನಿಸಿದರು.
ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ ಮಾತನಾಡಿ, ಪಂಚಾಯಿತಿ ರಾಜಕೀಯ ರಹಿತವಾಗಿ ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸಲು ಕಟಿಬದ್ಧವಾಗಿದೆ. ಖಾಸಗಿ ರೆಸಾರ್ಟ್‍ನಿಂದ ರೂ. 1 ಲಕ್ಷದ 60 ಸಾವಿರ ವಾರ್ಷಿಕ ತೆರಿಗೆ ಬರುತ್ತಿದೆ. ಹಾಲೇರಿ ಗ್ರಾಮದಲ್ಲಿ ಬಡವರಿಗೆ 4 ಏಕರೆ ಪೈಸಾರಿ ಜಾಗ ಗುರುತಿಸಿದ್ದು, ಕನಿಷ್ಟ 100 ಮನೆಯನ್ನು ಸೂರು ಇಲ್ಲದವರಿಗೆ ಕೊಡುವ ಇರಾದೆ ಪಂಚಾಯಿತಿಗೆ ಇದೆ ಎಂದು ಉತ್ತರಿಸಿದರು.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಜಿ.ಪಂ.ನಿಂದ ತನ್ನ ಕ್ಷೇತ್ರಕ್ಕೆ 8 ಲಕ್ಷ ಅನುದಾನ ಲಭ್ಯವಾಗಿದೆ. ಅನುದಾನ ತುಂಬಾ ಕಡಿಮೆಯಾಗಿದ್ದು, ಕಾಂಡನಕೊಲ್ಲಿ, ಕಂಬಿಬಾಣೆ, ಭೂತನಕಾಡು, 11 ಕಿ.ಮೀ. ರಸ್ತೆಯು ಪಿಡಬ್ಲೂಡಿ ವ್ಯಾಪ್ತಿಗೆ ಬಂದಿದ್ದು, ಈ ರಸ್ತೆ ಕಾಮಗಾರಿಗೆ ಅನುದಾನ ನೀಡಲಾಗಿದೆ. ಮುಖ್ಯ ಮಂತ್ರಿಗಳು ವಿಶೇಷ ನಿಧಿಯಿಂದ ರೂ. 38 ಲಕ್ಷ ವಿಶೇಷ ಪ್ಯಾಕೇಜ್ ಬರಲಿದ್ದು. ಆ ಹಣವನ್ನು ಈ ವಿಭಾಗದ ಅಭಿವೃದ್ಧಿಗೆ ವಿನಿಯೋಗಿಸಲಾಗುವದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ತಾ.ಪಂ.ನಿಂದ ರೂ. 10 ಲಕ್ಷ ಅನುದಾನ ಲಭಿಸಿದ್ದು, ಈ ವರ್ಷ ಚೆಟ್ಟಳ್ಳಿ ವಿಭಾಗಕ್ಕೆ ರೂ.7 ಲಕ್ಷಗಳನ್ನು ಕಾಮಗಾರಿ ಕೆಲಸಕ್ಕೆ ನೀಡಲಾಗಿದೆ. ಅದರಲ್ಲಿ ಕೆದಕಲ್ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ರೂ. 52 ಸಾವಿರ, ಹೊರೂರು ಅಂಗನವಾಡಿ ಕೇಂದ್ರಕ್ಕೆ ರೂ. 50,000, ಮೋದೂರು-ಹೋರೂರು ಕಾಂಕ್ರೀಟ್ ರಸ್ತೆಗೆ ಅನುದಾನ ನೀಡಲಾಗಿದೆ.
ತನ್ನ ವ್ಯಾಪ್ತಿಯ ಸೂರು ರಹಿತರಿಗೆ ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ತಾನು ಹೋರಾಟ ನಡೆಸುತ್ತೇನೆ. ಮುಂದಿನ ಸಾಲಿನಲ್ಲಿ ತನ್ನ ಅನುದಾನ ಶೇ. 75 ರಷ್ಟು ಕೆದಕಲ್ ವ್ಯಾಪ್ತಿಗೆ ಒದಗಿಸ ಲಾಗುವದೆಂದು ಭರವಸೆ ನೀಡಿದರು.
ಕೋಟೆಕಾಡು ತೋಟದ ಬೃಹದಾಕಾರದ ಮರಗಳು ಶಾಲೆಯ ಕಟ್ಟಡದ ಮೆಲೆ ಬೀಳುವ ಸಾಧ್ಯತೆಯಿದ್ದು, ಈ ಮರಗಳನ್ನು ತೆರವುಗೊಳಿಸಬೇಕೆಂದು ಕೆದಕಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಮೀನಾಕ್ಷಿ ಮನವಿ ಮಾಡಿದರು.
ಸುಂಟಿಕೊಪ್ಪ ನಾಡು ಕಚೇರಿಯಲ್ಲಿ ವಾಸ ದೃಢೀಕರಣ ಪತ್ರ ನೀಡಲು ರೂ. 100 ಲಂಚ ಪಡೆಯುತ್ತಿದ್ದಾರೆ. ಅಲ್ಲದೇ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಡ ರೋಗಿಗಳು ತೆರಳಿದರೆ ಸ್ಕ್ಯಾನಿಂಗ್ ಮಾಡಲು ಮಡಿಕೇರಿಯ ಖಾಸಗಿ ಲ್ಯಾಬ್‍ಗೆ ಚೀಟಿ ನೀಡುತ್ತಿದ್ದು, ಇದರಿಂದ ರೂ. 750 ಹಣವನ್ನು ನೀಡಿ ಸ್ಕ್ಯಾನಿಂಗ್ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಕ್ರಮಕ್ಕೆ ಆಗ್ರಹಿಸಿದರು.
ಕಾಡಾನೆಗಳು ಕೆದಕಲ್ ಸುತ್ತಮುತ್ತಲಿನಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯವರು ಶಾಲೆಗಳ ಮುಖ್ಯಸ್ಥರಿಗೆ, ತೋಟದ ಮಾಲೀಕರಿಗೆ ಮಾಹಿತಿ ನೀಡಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ ಹೇಳಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ, ಸದಸ್ಯರುಗಳಾದ ಬಿ.ಎಂ. ವೆಂಕಪ್ಪ, ದೇವಿಪ್ರಸಾದ್ ಕಾಯರ್ ಮಾರ್, ರಮೇಶ್, ಪವಿತ್ರ, ಹರಿಣಿ, ಕಾವೇರಿ, ಪಿಡಿಓ ವೀಣಾ, ನೋಡಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಹೆಚ್.ಬಿ. ಗಣೇಶ್, ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ, ಸೆಸ್ಕ್ ಇಂಜಿನಿಯರ್ ಚಂದ್ರಪ್ಪ, ಪಶುವೈದ್ಯ ಇಲಾಖೆಯ ಅಧಿಕಾರಿ ಬೋಪಯ್ಯ ಇದ್ದರು.
ಪಂಚಾಯಿತಿ ಸಿಬ್ಬಂದಿ ರಾಮಚಂದ್ರ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ವೆಂಕಪ್ಪ ವಂದಿಸಿದರು.