ಗೋಣಿಕೊಪ್ಪಲು, ಡಿ. 1: ಬರಗಾಲದ ಬಿಸಿಲಿನ ತಾಪಕ್ಕೆ ಮೃದು ಜೀವದ ಪಕ್ಷಿಗಳು ಬಲಿಯಾಗುತ್ತಿರುವ ಘಟನೆ ತಿತಿಮತಿ ಸಮೀದ ರೇಷ್ಮೆಹಡ್ಲು, ತಾರಿಕಟ್ಟೆ ಮೊದಲಾದ ಭಾಗಗಳಲ್ಲಿ ಕಂಡು ಬಂದಿದೆ. ಬಿಳಿ ಮತ್ತು ಕಂದು ಬಣ್ಣದ ‘ಕೊಳದ ಬಕ (ಗದ್ದೆಗುಮ್ಮ) ಪಕ್ಷಿ ಹಾಗೂ ಸೋರೆ (ಚೋರೆ) ಪಕ್ಷಿಗಳು ನೂರಾರು ಸಂಖ್ಯೆಯಲ್ಲಿ ಮೃತ ಪಟ್ಟಿವೆ.

ಮಾವಕಲ್ಲು ಮೀಸಲು ಅರಣ್ಯದ ಅಂಚಿನಲ್ಲಿರುವ ತಾರಿಕಟ್ಟೆಯಲ್ಲಿ ಮರದ ಮೇಲೆ ಕುಳಿತಿದ್ದ ಕೊಳದ ಬಕ ಪಕ್ಷಿಗಳು ಕೆಳಗೆ ಬಿದ್ದು ಮೃತಪಟ್ಟಿವೆ. ಕೆಲವು ಪಕ್ಷಿಗಳು ಹಾರಾಡಲು ಸಾಧ್ಯವಾಗದೆ ನೆಲದಲ್ಲಿ ಕುಳಿತು ಮೆಲ್ಲನೆ ಚಲಿಸುತ್ತಿವೆ. ಅವುಗಳನ್ನು ಹಿಡಿಯಲು ಹೋದರೂ ಹಾರಲಾಗದ ಸ್ಥಿತಿಯಲ್ಲಿದ್ದು ನೋಡುತ್ತಿದ್ದಂತೆಯೇ ಜೀವ ಬಿಡುತ್ತಿವೆ. ಕಳೆದ 15 ದಿನಗಳಿಂದ ಸೋರೆ ಹಕ್ಕಿಯೂ ಕೂಡ ಇದೇ ರೀತಿ ಸಾಯುತ್ತಿವೆ ಎಂದು ಅಬ್ಬೂರು ತಾರಿಕಟ್ಟೆ ನಿವಾಸಿಗಳಾದ ಮಧು, ಲತೀಫ್ ಹೇಳಿದ್ದಾರೆ.

ಸಾಕಿದ ಕೋಳಿಗಳೂ ಸೊರಗಿ ಕುಳಿತುಕೊಂಡು ಗಡಗಡನೆ ನಡುಗುತ್ತಾ ಬಳಿಕ ಜೀವ ಬಿಡುತ್ತಿವೆ. ಪಕ್ಷಿ ಕಾಯಿಲೆ ಕೋಳಿಗಳಿಗೂ ಹರಡಿದೆ ಎಂದು ಹೇಳಿದರು.

ಮಧು ಅವರ ಕಾಫಿ ತೋಟದ ಮರಗಳ ಬುಡದಲ್ಲಿ ಪಕ್ಷಿ ಸತ್ತು ಬಿದ್ದಿರುವದು ಗೋಚರಿಸಿತು. ಮನೆ ಮುಂದೆ ಬಿದ್ದ ಪಕ್ಷಿಗಳನ್ನು ಕೆಲವರು ದುರ್ವಾಸನೆ ಬೀರುತ್ತಿದ್ದುದರಿಂದ ಬೆಂಕಿ ಕೊಟ್ಟು ಸುಟ್ಟು ಹಾಕಿದರು. ಮತ್ತೆ ಕೆಲವನ್ನು ಬೆಕ್ಕು ಮತ್ತು ನಾಯಿಗಳು ಕಾಫಿ ತೋಟಕ್ಕೆ ಎಳೆದುಕೊಂಡು ಹೋಗಿ ತಿನ್ನುತ್ತಿದ್ದವು.

ಈ ಬಗ್ಗೆ ತಿತಿಮತಿ ವಲಯ ಅರಣ್ಯಾಧಿಕಾರಿ ಗೋಪಾಲ್ ಅವರನ್ನು ವಿಚಾರಿಸಿದಾಗ ಕೆಲವು ಪಕ್ಷಿಗಳು ಮೃತಪಟ್ಟಿರುವದು ಗಮನಕ್ಕೆ ಬಂದಿದೆ. ಇದಕ್ಕೆ ಕಾರಣವೇನು ಎಂಬದನ್ನು ವೈದ್ಯರ ಪರೀಕ್ಷೆಯ ಬಳಿಕ ತಿಳಿದು ಬರಲಿದೆ. ಸಂಬಂಧಪಟ್ಟ ವೈದ್ಯಾಧಿಕಾರಿಯ

(ಮೂರನೇ ಪುಟದಿಂದ) ಗಮನಕ್ಕೆ ತರಲಾಗುವದು ಎಂದು ಹೇಳಿದರು. ಪಕ್ಷಿಗಳು ಮೃತಪಟ್ಟಿರುವ ಬಗ್ಗೆ ಗೋಣಿಕೊಪ್ಪಲು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಪಕ್ಷಿ ತಜ್ಞ ಡಿ.ಕೃಷ್ಣಚೈತನ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು ಬಿಸಿಲಿನ ತಾಪಕ್ಕೆ ಹಕ್ಕಿಜ್ವರ ಬಂದಿರುವ ಸಾಧ್ಯತೆ ಇದೆ. ಈ ರೋಗ ಕೋಳಿಗಳಿಗೂ ಬರಲಿದೆ. ಇದೆಲ್ಲ ಬರಗಾಲದ ಪರಿಣಾಮ ಎಂದರು.

ಪಕ್ಷಿಗಳಿಗೆ, ಪ್ರಾಣಿಗಳಿಗೆ ಬಿಸಿಲಿನಲ್ಲಿ ನೀರೇ ಆಧಾರ. ಕೆರೆಗಳೆಲ್ಲ ಒಣಗಿರುವದರಿಂದ ನೀರಿನ ಅಭಾವ ಕಾಡುತ್ತಿದೆ. ಮನೆಗಳ ಮುಂದೆ ಒಂದು ಕೆರೆಯಲ್ಲಿ ನೀರು ತುಂಬಿಸಿಟ್ಟರೆ ಒಳ್ಳೆಯದು. ಬಾಯಾರಿ ಬಂದ ಎಷ್ಟೋ ಕಾಡಿನ ಪಕ್ಷಿಗಳು ಯಾರೂ ಇಲ್ಲದ ಸಮಯದಲ್ಲಿ ಬಂದು ಕುಡಿದು ಜೀವ ಉಳಿಸಿಕೊಳ್ಳುತ್ತವೆ ಎಂದು ಹೇಳಿದರು.