ಸೋಮವಾರಪೇಟೆ, ಆ. 29: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವು ಅಂಗಡಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನೂರಾರು ಸಾರ್ವಜನಿಕರು ಇಂದು ಬೀದಿಗಿಳಿದು ನೇರುಗಳಲೆ ಗ್ರಾ.ಪಂ.ನ ಅಬ್ಬೂರುಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿ ತಡೆದು, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾ ನಿರತರು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕಳ್ಳರ ರಕ್ಷಣೆಗೆ ಇಲಾಖೆಯ ಅಧಿಕಾರಿಗಳು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಲಂಚಕೋರ ಅಧಿಕಾರಿ ಗಳನ್ನು ತಕ್ಷಣ ಅಮಾನತುಗೊಳಿಸಬೇಕು. ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.
ಕೆಲಕಾಲ ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗ ಪ್ರತಿಭಟಿಸುತ್ತಿದ್ದ ಸಾರ್ವಜನಿಕರ ಹೋರಾಟಕ್ಕೆ ಯಾವ ಸ್ಪಂದನೆಯೂ ದೊರಕದ ಹಿನ್ನೆಲೆ, ರಾಜ್ಯ ಹೆದ್ದಾರಿ ತಡೆಯಲು ಮುಂದಾದರು. ಇದರಿಂದಾಗಿ ಸೋಮವಾರಪೇಟೆ-ಬಾಣಾವರ ರಸ್ತೆಯಲ್ಲಿ ಸಂಚರಿಸಬೇಕಿದ್ದ ಬಸ್ ಸಹಿತ ಇತರ ವಾಹನಗಳು ರಸ್ತೆಯಲ್ಲೇ ನಿಲ್ಲಬೇಕಾಯಿತು. ವಿಷಯ ಅರಿತ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರ ಶೇಖರ್ ಅವರು ಮಧ್ಯಾಹ್ನ 12 ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಅಬಕಾರಿ ಇಲಾಖೆಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದರು. ನೂರಾರು ಸಂಖ್ಯೆಯಲ್ಲಿದ್ದ ಸಾರ್ವಜನಿಕರು, ವಿವಿಧ ಜನಪ್ರತಿನಿಧಿ ಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರುಗಳು ಅಬಕಾರಿ ಇಲಾಖಾ ಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಅಂಗಡಿ, ಮನೆಗಳಲ್ಲಿ ಕ್ವಾರ್ಟರ್ ಮಾರಿ ಬಡವರ ಜೀವನ ಬೀದಿಗೆ ತಳ್ಳುತ್ತಿರುವ ಕಳ್ಳರಿಗೆ ಧಿಕ್ಕಾರ, ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ಕ್ವಾರ್ಟರ್ ಮಾರುವವರಿಗೆ, ಆಟೋ, ಬೈಕ್ನಲ್ಲಿ ಪ್ಯಾಕೆಟ್ ಸರಬರಾಜು ಮಾಡುವವರಿಗೆ ಧಿಕ್ಕಾರ ಕೂಗಿದರು. ಅಬಕಾರಿ ಇಲಾಖಾಧಿಕಾರಿಗಳ ವಿರುದ್ಧ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಗ್ರಾಮದ ಅಂಗಡಿ, ಕೆಲ ಮನೆಗಳಲ್ಲೂ ಮದ್ಯ ದೊರಕುತ್ತಿರು ವದರಿಂದ ಪುರುಷರೂ ಸೇರಿದಂತೆ ಮಹಿಳೆಯರೂ ಮದ್ಯದ ದಾಸರಾಗುತ್ತಿದ್ದಾರೆ. ಬೆಳಗ್ಗಿನಿಂದಲೇ ಮದ್ಯ ಸಿಗುತ್ತಿರುವದರಿಂದ ಹಲವು ಪುರುಷರು ಕೆಲಸಕ್ಕೇ ಹೋಗುತ್ತಿಲ್ಲ. ಹಲವು ಸ್ವಸಹಾಯ ಸಂಘಗಳಿಂದ ನಾವುಗಳು ಸಾಲ ಪಡೆದಿದ್ದು, ಮನೆಯ ಯಜಮಾನ ಕೆಲಸಕ್ಕೆ ಹೋಗದೇ ಇರುವದರಿಂದ ಸಾಲ ತೀರಿಸುವದೂ, ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರು ಅಳಲು ತೋಡಿಕೊಂಡರು.
ಬೆಳಿಗ್ಗಿನಿಂದ ಪ್ರಾರಂಭವಾದ ರಸ್ತೆ ತಡೆ ಪ್ರತಿಭಟನೆ ಮಧ್ಯಾಹ್ನ ನಂತರವೂ ಮುಂದುವರೆಯಿತು. ಅಪರಾಹ್ನ 3 ಗಂಟೆ ಸುಮಾರಿಗೆ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಬಿ.ಸಿ. ಶಿವಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರುಗಳು ಆಗಮಿಸಿ ಪ್ರತಿಭಟನಾಕಾರ ರೊಂದಿಗೆ ಚರ್ಚಿಸಿ ದರು. ಇದೇ ಸಂದರ್ಭ ಅಬಕಾರಿ ಇಲಾಖೆಯ ಡಿವೈಎಸ್ಪಿ ಚೈತ್ರ, ಇನ್ಸ್ಪೆಕ್ಟರ್ ನಟರಾಜ್ ಆಗಮಿಸಿದರು. ತಕ್ಷಣ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವ ದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯ ಲಾಯಿತು.
ಮುಂದಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟ ಮುಂದುವರೆದರೆ ಅಬಕಾರಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ಸವಿತ, ಗ್ರಾ.ಪಂ. ಉಪಾಧ್ಯಕ್ಷ ದಿವಾಕರ್, ಸದಸ್ಯರುಗಳು, ಮುಖಂಡರಾದ ಅರೆಯೂರು ಜಯಣ್ಣ, ಮೋಹನ್ದಾಸ್, ಪಿ.ಡಿ. ಪ್ರಕಾಶ್, ಸತೀಶ್, ರೂಪಾ ಸುರೇಶ್, ರೂಪಾ ಸತೀಶ್, ಪ್ರಮೋದ್ ಸೇರಿದಂತೆ ಮಸಗೋಡು, ಅಬ್ಬೂರುಕಟ್ಟೆ, ತಣ್ಣೀರುಹಳ್ಳ, ಚಿಕ್ಕಬ್ಬೂರು, ವಳಗುಂದ ವ್ಯಾಪ್ತಿಯ ನೂರಾರು ಸಾರ್ವಜನಿಕರು, ಸ್ತ್ರಿಶಕ್ತಿ ಸ್ವಸಹಾಯ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.