ಶನಿವಾರಸಂತೆ, ಅ. 21: ಆಲೂರು ಸಿದ್ದಾಪುರದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ, 5 ತಿಂಗಳ ಗರ್ಭವತಿಯಾಗಲು ಕಾರಣಕರ್ತನಾದ ಪ್ರಿಯಕರ ಆಲೂರು ಸಿದ್ದಾಪುರದ ಕಲ್ಲುಕೋರೆಯಲ್ಲಿ ಕೆಲಸ ಮಾಡುವ ಶಿವಕುಮಾರ್ ಎಂಬಾತನನ್ನು ಶನಿವಾರಸಂತೆ ಪೊಲೀಸರು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಘಟನೆ ಇಂದು ನಡೆದಿದೆ.
ಆಲೂರು ಸಿದ್ದಾಪುರ ಗ್ರಾಮದ ಅಪ್ರಾಪ್ತ ಬಾಲಕಿಯೋರ್ವಳನ್ನು ಅದೇ ಗ್ರಾಮದ ಶಶಿ ಎಂಬವರಿಗೆ ಸೇರಿದ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತ ಪ್ರೀತಿಸಿ, ಮದುವೆಗೆ ಬಾಲಕಿಯ ಮನೆಯವರ ವಿರೋಧವಿದ್ದ ಕಾರಣ ಶಿವಕುಮಾರ್ ಆಕೆಯನ್ನು ಧರ್ಮಸ್ಥಳಕ್ಕೆ ಕರೆದೊಯ್ದು ವಿವಾಹವಾಗಿ ಭಟ್ಕಳದ ಬೇಂಗ್ರೆಬಂಗಾರ ಮಕ್ಕಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆಲೂರು ಸಿದ್ದಾಪುರದಲ್ಲಿ ಮಗಳು ಕಾಣೆಯಾದ ಬಗ್ಗೆ ತಂದೆ ರವಿ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದ್ದು, ಶನಿವಾರಸಂತೆ ಪೊಲೀಸರು ಆರು ತಿಂಗಳ ನಂತರ ಅಪ್ರಾಪ್ತ ಬಾಲಕಿ ಹಾಗೂ ಆರೋಪಿ ಶಿವಕುಮಾರನನ್ನು ಕೊಲ್ಲೂರಿನ ಮಾರಣಕಟ್ಟೆ ಗ್ರಾಮದಲ್ಲಿ ಪತ್ತೆ ಹಚ್ಚಿ ಇಂದು ಶನಿವಾರಸಂತೆ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದರು.
ಸೋಮವಾರಪೇಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಮಾರ್ಗದರ್ಶಿ ಅಶ್ವಿನಿ, ಜಿಲ್ಲಾ ಮಹಿಳಾ ಆಯೋಗದ ಕಾರ್ಯದರ್ಶಿ ಸುಶೀಲಾ ಅವರ ಸಮ್ಮುಖದಲ್ಲಿ ಹೇಳಿಕೆಯನ್ನು ಪಡೆದು ಪೊಲೀಸರು ಆರೋಪಿ ಶಿವಕುಮಾರನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ, ಸಹಾಯಕಿ ಸಬ್ಇನ್ಸ್ಪೆಕ್ಟರ್ ಖತೀಜಾ, ಸಿಬ್ಬಂದಿಗಳಾದ ಸಂತೋಷ್, ಮಂಜುನಾಥ, ಸಫೀರ್, ಶಶಿ ಪಾಲ್ಗೊಂಡಿದ್ದರು.