*ಸಿದ್ದಾಪುರ, ಜ31 : ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ.ಮಣಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಬಗ್ಗೆ ಚರ್ಚಿಸಬೇಕಾದ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿರು ವದು ಉತ್ತಮ ಬೆಳವಣಿಗೆ ಅಲ್ಲ. ಅವರು ನೀಡಿರುವ ರಾಜೀನಾಮೆ ಯನ್ನು ಕೂಡಲೇ ಹಿಂಪಡೆಯ ಬೇಕೆಂದು ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಮೂಸಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ ಹಾಗೂ ಕೆಲ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯತ್ ಜಿಲ್ಲೆಯಲ್ಲಿ ಅತೀ ಹೆಚ್ಚು ವರಮಾನ ಮತ್ತು ಅತೀ ಹೆಚ್ಚು ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಬೆಂಬಲದಲ್ಲಿ ಆಡಳಿತ ನಡೆಯುತ್ತಿದ್ದರೂ ಸ್ವಪಕ್ಷದ ಕೆಲವು ಸದಸ್ಯರು ಆಡಳಿತಕ್ಕೆ ಹಿನ್ನಡೆ ಉಂಟು ಮಾಡುತ್ತಿರುವದು ಖಂಡನೀಯ ಎಂದು ಹೇಳಿದರು.

ಗ್ರಾಮದಲ್ಲಿರುವ ಕಸ ವಿಲೇವಾರಿ ಸಮಸ್ಯೆ ಮತ್ತು ಇತರ ಮೂಲಭೂತ ಸಮಸ್ಯೆಗಳನ್ನು ನೀಗಿಸಲು ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷ ಮಣಿ ಶ್ರಮ ಪಡುತ್ತಿದ್ದಾರೆ. ಗ್ರಾಮದ ಸಮಸ್ಯೆಯನ್ನು ಬಗೆ ಹರಿಸಲು ಅಧ್ಯಕ್ಷರು ಸ್ವಂತ ಖರ್ಚಿನಿಂದ ಈಗಾಗಲೇ ಉಸ್ತುವಾರಿ ಸಚಿವರನ್ನು, ಜಿಲ್ಲೆಯ ಶಾಸಕರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ಸಮಾಲೋಚನೆ ನಡೆಸಿದ ಪರಿಣಾಮ ಸಮಸ್ಯೆ ಇತ್ಯರ್ಥವಾಗುವ ಹಂತದಲ್ಲಿ ಇದೆ.

ಈ ಹಿಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಸ ವಿಲೇವಾರಿಗೆ ಜಾಗ ಗುರುತಿಸಲಾಗಿತ್ತು. ಗ್ರಾಮ ಪಂಚಾಯತ್ ಸದಸ್ಯ ಶಿವಕುಮಾರ್ ಹಾಗೂ ಕೆಲ ಸದಸ್ಯರು ಕಸ ವಿಲೇವಾರಿಗೆ ಜಾಗ ಸಿಗದಂತೆ ತಡೆಯೊಡ್ಡಿದ್ದರು. ಸೋಮವಾರದಂದು ನಡೆದ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದಂತೆ ಏಕಾಏಕಿ ಸದಸ್ಯ ಶಿವಕುಮಾರ್ ಅನಗತ್ಯವಾಗಿ ಅಧ್ಯಕ್ಷರನ್ನು ಟೀಕಿಸಿ ರಾಜೀನಾಮೆಗೆ ಒತ್ತಾಯಿಸಿರುವದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಈ ಹಿಂದೆ ಕಸ ವಿಲೇವಾರಿಗೆ ಜಾಗ ಗುರುತಿಸಿದ ಸಂದರ್ಭ ಸದಸ್ಯ ಶಿವಕುಮಾರ್ ಹಾಗೂ ಇತರ ಸದಸ್ಯರ ವಿರುದ್ಧ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಲು ಒತ್ತಾಯಿಸಿದ್ದರು. ಆಡಳಿತದ ಬಗ್ಗೆ ಅರಿವು ಮತ್ತು ಗ್ರಾಮಾಭಿವೃದ್ಧಿ ಬಗ್ಗೆ ಕಳಕಳಿ ಇಲ್ಲದ ಕೆಲ ಮಂದಿ ಗುಂಪುಗಾರಿಕೆಯಲ್ಲಿ ತೊಡಗಿರುವದು ವಿಷಾದನೀಯ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಜಿ.ಕರ್ಪಯ್ಯ, ಜಾಫರ್. ವಿ.ಕೆ, ಟಿ.ಎಚ್. ಮಂಜುನಾಥ್, ಎಸ್.ಬಿ. ಪ್ರತೀಶ, ಕೆ.ಸಿ. ಮಿಲನ್, ಪೂವಮ್ಮ, ಪ್ರೇಮ, ಶಾರದ, ಶೀಲ ಸುಶೀಲ, ಸರೋಜ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಅಯ್ಯ, ನಾಸರ್, ತಮಿಳ್ ಸೆಲ್ವಂ ಆರೋಪಿಸಿದ್ದಾರೆ.