ಶ್ರೀಮಂಗಲ, ಜ. 13 : ಅಂತರ್ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪೊನ್ನಂಪೇಟೆ-ಹುದಿಕೇರಿ ಕುಟ್ಟ ರಾಜ್ಯ ಹೆದ್ದಾರಿ ನಡುವೆ ಹುದಿಕೇರಿ ಬಳಿ ರಸ್ತೆಯ ಅಂಚಿನಲ್ಲಿ ಕಂದಕ (ಹಳ್ಳ) ಅಪಾಯಕಾರಿಯಾಗಿ ಪರಿಣಮಿಸಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಾಂಬರು ರಸ್ತೆಯ ಅಂಚಿನಲ್ಲಿಯೇ ಹಳ್ಳ ಏರ್ಪಟ್ಟಿದ್ದು, ಎದುರು ಬದಿಯ ವಾಹನ ಬಂದಾಗ ಹಳ್ಳದ ಬದಿಯ ವಾಹನ ಒಂದಿಷ್ಟು ರಸ್ತೆ ಬಿಟ್ಟು ನೆಲಕ್ಕೆ ಇಳಿದರೂ ಹಳ್ಳಕ್ಕೆ ಬೀಳುವ ಅಪಾಯವಿದೆ. ರಸ್ತೆ ಬದಿಯಲ್ಲಿ ಸುಮಾರು 20 ಅಡಿಯ ಹಳ್ಳವಿದ್ದು, ಈ ಹಿಂದೆ ಈ ಬದಿಯಲ್ಲಿ ಕಾಡು ಬೆಳೆದಿತ್ತು. ಇದೀಗ ಕಾಡು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಕಂದಕ ಗೋಚರಿಸಿದೆ. ರಸ್ತೆಯ ಡಾಂಬರು ಬಿಟ್ಟು ಒಂದು ಅಡಿಯ ಜಾಗ ಸಹ ಇಲ್ಲ.
ಈ ರಸ್ತೆಯಲ್ಲಿ ಕಾಡು ಬೆಳೆದಿದ್ದಾಗ ಹಲವು ಅಪಘಾತಗಳು ಉಂಟಾಗಿದ್ದರೂ, ಕಾಡಿನ ಒಳಗೆ ವಾಹನಗಳು ಸಿಕ್ಕಿಕೊಂಡು ಕಂದಕಕ್ಕೆ ಬಿದ್ದು ದೊಡ್ಡ ಪ್ರಮಾಣದ ಅಪಾಯವಾಗುವದನ್ನು ತಡೆದಿತ್ತು. ಆದರೆ ಇದೀಗ ಇಲ್ಲಿ ಮುಂಜಾಗ್ರತ ಕ್ರಮವಾಗಿ ಇಲ್ಲಿ ತಡೆಗೋಡೆ ಅಥವಾ ರಸ್ತೆ ಬದಿಗೆ ಮಣ್ಣು ಹಾಕಿ ಅಗಲಗೊಳಿಸುವ ಮೂಲಕ ಅಪಾಯಕಾರಿಯಾಗಿರುವ ಈ ರಸ್ತೆಗೆ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.