ಸೋಮವಾರಪೇಟೆ, ಜು. 5: ಜೂನ್ 27 ರಂದು ಸಮೀಪದ ಕುಸುಬೂರು ಗ್ರಾಮದಲ್ಲಿ ನಡೆದ ಆಟೋ ಮತ್ತು ವ್ಯಾನ್ ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇಂದಿಗೂ ಚಿಕಿತ್ಸೆಯಲ್ಲಿರುವ ವಿದ್ಯಾರ್ಥಿಗೆ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ನೆರವಿನ ಹಸ್ತ ಚಾಚಿದ್ದು, ರೂ. 28.260 ಗಳನ್ನು ವಿದ್ಯಾರ್ಥಿಯ ಪೋಷಕರಿಗೆ ಹಸ್ತಾಂತರಿಸಲಾಯಿತು.

ಜೂನ್ 27 ರಂದು ಬೆಳಿಗ್ಗೆ ಬಜೆಗುಂಡಿ ಗ್ರಾಮದಿಂದ ಬೇಳೂರು ಸರ್ಕಾರಿ ಶಾಲೆಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಕುಸುಬೂರು ಗ್ರಾಮದ ಬಳಿ ವ್ಯಾನ್ ಡಿಕ್ಕಿಪಡಿಸಿತ್ತು. ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಶರತ್‍ನನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಸಾಗಿಸಲಾಗಿತ್ತು.

ಗಂಭೀರ ಗಾಯಗೊಂಡ ಶರತ್ ಇಂದಿಗೂ ಚಿಕಿತ್ಸೆಯಲ್ಲಿದ್ದು, ತಲೆ ಹಾಗೂ ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಈತನ ಪೋಷಕರು ಕೂಲಿ ಕಾರ್ಮಿಕರಾಗಿರುವ ಹಿನ್ನೆಲೆ ಚಿಕಿತ್ಸೆಗೆ ಹಣಕಾಸಿನ ಕೊರತೆ ಎದುರಾಗಿತ್ತು. ಇದನ್ನು ಮನಗಂಡ ಗ್ರಾಮದ ಮಿಥುನ್, ವಿಜಯ ಕುಮಾರ್ ಅವರುಗಳು ಇತರ ಗೆಳೆಯರೊಂದಿಗೆ ಸೇರಿ ಗ್ರಾಮಸ್ಥರು ಸೇರಿದಂತೆ ಬಿಟಿಸಿಜಿ, ಜೂನಿಯರ್ ಕಾಲೇಜು, ಸಂತ ಜೋಸೆಫರ ಕಾಲೇಜುಗಳಿಗೆ ತೆರಳಿ ಹಣ ಸಂಗ್ರಹಿಸಿದ್ದು, ಈ ಹಣವನ್ನು ವಿದ್ಯಾರ್ಥಿಯ ತಾಯಿ ಮಂಜುಳಾ ಅವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಯ ಚಿಕಿತ್ಸೆಗೆ ಸಹಾಯ ಹಸ್ತ ನೀಡುವವರು ಮೊ: 7349265062 ಸಂಖ್ಯೆಯನ್ನು ಸಂಪರ್ಕಿಸಬಹುದು.