ಶ್ರೀಮಂಗಲ, ನ. 1: ಗಡಿಭಾಗದಲ್ಲಿ ಅನ್ಯ ಭಾಷೆಗಳು ಕನ್ನಡ ಭಾಷೆಯನ್ನು ಕೊಲ್ಲುತ್ತಿದ್ದು ಕನ್ನಡವನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ ಎಂದು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮಂಗಲ ಹೋಬಳಿ ಘಟಕ ಹಾಗೂ ಕುಟ್ಟ ಗ್ರಾ.ಪಂ.ಯ ಜಂಟಿ ಆಶ್ರಯದಲ್ಲಿ ಕುಟ್ಟ ಸಮುದಾಯ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು. ಗಡಿ ಪ್ರದೇಶದಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷಿಕರು ಹೆಚ್ಚು ಇರುವದರಿಂದ ಕನ್ನಡ ಭಾಷೆ ಇಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಇದೀಗ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಶ್ರೀಮಂಗಲ ಹೋಬಳಿ ಕ.ಸಾ.ಪ. ಘಟಕದ ಆಶ್ರಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ಸಹಕಾರ ದಲ್ಲಿ ಗಡಿ ಉತ್ಸವ ಆಚರಿಸಲಾಗುವದು. ಅಲ್ಲದೆ ಶ್ರೀಮಂಗಲದಲ್ಲಿ ಕನ್ನಡ ಭವನ ನಿರ್ಮಿಸಲಾಗುವದು ಎಂದರು.
ಕನ್ನಡ ಧ್ವಜಾರೋಹಣ ಮಾಡಿದ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ, ಗಡಿ ಉತ್ಸವ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿ ಸೇರಿದಂತೆ ಕನ್ನಡ ಪರ ಎಲ್ಲಾ ಚಟುವಟಿಕೆಗಳಿಗೂ, ಕನ್ನಡ ಭವನ ನಿರ್ಮಾಣಕ್ಕೂ ಜಿ.ಪಂ. ವತಿಯಿಂದ ಹಾಗೂ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಭರವಸೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ, ಗಡಿ ಪ್ರದೇಶ ಕುಟ್ಟದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳ ನಾಮಫಲಕವು ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿದ್ದು, ನಾವು ಕರ್ನಾಟಕದಲ್ಲಿದ್ದೇವೆಯೇ ಎಂಬ ಸಂಶಯ ಬರುವಂತಾಗಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಕನ್ನಡದಲ್ಲಿ ನಾಮಫಲಕ ಬರೆಸಬೇಕೆಂದು ಸಲಹೆ ನೀಡಿದರು.
ಕುಟ್ಟ ಗ್ರಾ.ಪಂ ಅಧ್ಯಕ್ಷೆ ಲೀಲಾಪ್ರಭು ಮಾತನಾಡಿ, ನಮ್ಮ ಮನಸ್ಸಿನಲ್ಲಿ ಮೊದಲು ಕನ್ನಡ ಪ್ರೇಮ ಬೆಳೆಸಿಕೊಳ್ಳ ಬೇಕು ಅಂದರೆ ಮಾತ್ರ ಭಾಷೆ ಬೆಳೆಯಲು ಸಾಧ್ಯ. ಅಂಗಡಿ ಮುಂಗಟ್ಟು ಗಳ ನಾಮಫಲಕ ಕನ್ನಡದಲ್ಲಿ ಬರೆಸಲು ಕ್ರಮ ಕೈಗೊಳ್ಳಲಾಗುವದು ಎಂದರು.
ವೀರಾಜಪೇಟೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪಡ್ನೇಕರ್ ಮಾತನಾಡಿ, ಕನ್ನಡಕ್ಕೆ ದೇಶದಲ್ಲಿ ಉತ್ತಮ ಸ್ಥಾನಮಾನವಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದೂ ಆಗಬೇಕು. ಗಡಿ ಉತ್ಸವ ಹಾಗೂ ಕನ್ನಡ ಭವನಕ್ಕೆ ತಾ.ಪಂ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಭರವಸೆ ನೀಡಿದರು. ಜಿಲ್ಲಾ ಕ.ಸಾ.ಪ. ಸದಸ್ಯ ಶ್ರೀಧರ್ ನೆಲ್ಲಿತ್ತಾಯ ಹಾಗೂ ಬಾಲಕೃಷ್ಣ ರೈ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮಂಗಲ ಹೋಬಳಿ ಕ.ಸಾ.ಪ. ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಒಂದು ಜನಾಂಗದ ಅಭಿವೃದ್ಧಿ ಆ ಜನಾಂಗದ ಸಂಸ್ಕøತಿ, ಸಾಹಿತ್ಯ, ಕಲೆ, ಜಾನಪದವನ್ನು ಅವಲಂಬಿಸಿರುತ್ತದೆ. ಇದೆಲ್ಲದಕ್ಕೂ ಮೂಲವಾದ ಭಾಷೆ ಅಳಿವಿನ ಅಂಚಿಗೆ ತಲಪಿದರೆ ಆ ಜನಾಂಗ ನಾಶವಾಗು ತ್ತದೆ. ಅದಕ್ಕಾಗಿ ಭಾಷೆಯ ಉಳಿವು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶ್ರೀಮಂಗಲ ಹೋಬಳಿ ಘಟಕ ವ್ಯಾಪ್ತಿಯಲ್ಲಿ ಗಡಿ ಉತ್ಸವ, ರಾಜ್ಯ ಮಟ್ಟದ ಜಲಪಾತ ಕವಿಗೋಷ್ಠಿ ಸೇರಿದಂತೆ ಕನ್ನಡಾಭಿವೃದ್ಧಿಗೆ ಪೂರಕವಾದ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ವೇದಿಕೆಯಲ್ಲಿ ಶ್ರೀಮಂಗಲ ಹೋಬಳಿ ಕ.ಸಾ.ಪ. ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕನ್ನಡ ಪರ ಸಂಘಟನೆಯ ಪ್ರತಿನಿಧಿ ಸುರೇಶ್, ವೀರಾಜಪೆಟೆ ತಾಲೂಕು ಕ.ಸಾ.ಪ. ಕಾರ್ಯದರ್ಶಿ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಹಾಗೂ ರೇಖಾ ಶ್ರೀಧರ್ ಉಪಸ್ಥಿತರಿದ್ದರು.
ಕೋಟ್ರಂಗಡ ಸಜನಿ ಕ.ಸಾ.ಪ. ಶ್ರೀಮಂಗಲ ಹೋಬಳಿ ಘಟಕದ ಮಹಿಳಾ ಪ್ರತಿನಿಧಿ ಉಳುವಂಗಡ ಕಾವೇರಿ ಉದಯ ಸ್ವಾಗತಿಸಿ, ಕಾರ್ಯದರ್ಶಿಗಳಾದ ಮಂಡಂಗಡ ಅಶೋಕ್ ನಿರೂಪಿಸಿ, ಬುಟ್ಟಿಯಂಡ ಸುನೀತ ಗಪ್ಪಣ್ಣ ವಂದಿಸಿದರು.