ಕೋಲ್ಕತಾ ಜೂ.23 : ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕ ಮಾಡುವ ಮೂಲಕ ಬಿಸಿಸಿಐ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಲಕ್ಷ್ಮಣ್ ನೇತೃತ್ವದ ಸಲಹಾ ಸಮಿತಿ ಕನ್ನಡಿಗ ಕುಂಬ್ಳೆ ಅವರನ್ನು ಕೋಚ್ ಆಗಿ ನೇಮಕ ಮಾಡಲು ಶಿಫಾರಸು ಮಾಡಿದೆ. ಧರ್ಮಶಾಲಾದಲ್ಲಿ ನಡೆದ ಸಭೆಯ ನಂತರ ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿರುವ ದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅಧಿಕೃತವಾಗಿ ಗುರುವಾರ ಸಂಜೆ ಘೋಷಿಸಿದರು. ಬಿಸಿಸಿಐ ಮಂಗಳವಾರವಷ್ಟೇ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ 7 ಮಂದಿಯ ಸಂದರ್ಶನ ನಡೆಸಿತ್ತು. ಅನಿಲ್ ಕುಂಬ್ಳೆ ಜೊತೆಗೆ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ, ಸಂದೀಪ್ ಪಾಟೀಲ್ ಕೋಚ್ ಹುದ್ದೆಯ ರೇಸ್ ನಲ್ಲಿದ್ದರು. ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ಕೆಲಸ ಮಾಡಿರುವ ಅನುಭವ ಕುಂಬ್ಳೆಗಿದೆ.