ಕುಶಾಲನಗರ, ಅ. 15: ಹಾರಂಗಿ ಯೋಜನಾ ವ್ಯಾಪ್ತಿಯಲ್ಲಿ ಗುತ್ತಿಗೆದಾರನೊಬ್ಬ ಅನಧಿಕೃತವಾಗಿ ಕಾಮಗಾರಿ ನಡೆಸುತ್ತಿರುವ ಹಿನೆÀ್ನಲೆಯಲ್ಲಿ ಯೋಜನಾ ವ್ಯಾಪ್ತಿಯ ಅಧಿಕಾರಿಗಳು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಪ್ರಕರಣ ವರದಿಯಾಗಿದೆ.
ಹಾರಂಗಿ ಯೋಜನೆಗೆ ಒಳಪಟ್ಟಂತೆ ಸೋಮವಾರಪೇಟೆ ಏತ ನೀರಾವರಿ ಯೋಜನೆಯ ಕಾಮಗಾರಿಯೊಂದನ್ನು ಕೃಷ್ಣ ಎಂಬವರು ಅನಧಿಕೃತವಾಗಿ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಅಧಿಕಾರಿ ಜಗದೀಶ್ ಎಂಬವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಂದಾಜು 50 ಲಕ್ಷ ರೂ.ಗಳ ವೆಚ್ಚದ ಕಾಮಗಾರಿಗೆ ಅಧಿಕೃತವಾಗಿ ಆದೇಶ ನೀಡದಿದ್ದರೂ ತಮ್ಮ ಗಮನಕ್ಕೆ ಬರದೆ ಕೆಲಸ ನಿರ್ವಹಿಸುತ್ತಿರುವದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮಾಹಿತಿ ಪ್ರಕಾರ ಹಾರಂಗಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಗುತ್ತಿಗೆದಾರ ಲೈಸನ್ಸ್ ಪಡೆದು ಕಾಮಗಾರಿ ನಡೆಸುತ್ತಿದ್ದು, ಈ ಹಿನೆÀ್ನಲೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿರುವ ಬಗ್ಗೆಯೂ ಕೆಲವು ನಾಗರಿಕರಿಂದ ದೂರುಗಳು ಕೇಳಿಬಂದಿವೆ.
ಹಾರಂಗಿ ಯೋಜನಾ ವ್ಯಾಪ್ತಿಯಲ್ಲಿ ಕೋಟಿಗಟ್ಟಲೆ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಹಿರಿಯ ಅಧಿಕಾರಿಯೊಬ್ಬರು ಶಾಮೀಲಾಗಿ ಈ ಅಕ್ರಮಗಳು ನಡೆಯುತ್ತಿವೆ ಎನ್ನುವ ಬಗ್ಗೆಯೂ ಮಾಹಿತಿ ಹೊರ ಬಿದ್ದಿದ್ದು ಈ ಬಗ್ಗೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಅಣೆಕಟ್ಟೆ ಅಧೀಕ್ಷಕ ಅಭಿಯಂತರರಿಗೂ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಣೆಕಟ್ಟೆ ಕಾರ್ಯಪಾಲಕ ಅಭಿಯಂತರ ಧರ್ಮರಾಜು ಅವರಲ್ಲಿ ಸ್ಪಷ್ಟನೆ ಬಯಸಿದಾಗ ಗುತ್ತಿಗೆದಾರನೊಬ್ಬ ಆದೇಶವಿಲ್ಲದೆ ಯೋಜನಾ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಕ್ಷೇತ್ರ ಶಾಸಕರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.