ಮಡಿಕೇರಿ, ಡಿ.5 : ಯಾವದೇ ದಾಖಲೆ ಗಳಿಲ್ಲದೆ ಸುಮಾರು ರೂ.35 ಲಕ್ಷಕ್ಕೂ ಅಧಿಕ ಹಣವನ್ನು ಹೊಂದಿದ್ದ ಸೋಮವಾರಪೇಟೆ ತಾ.ಪಂ ಸದಸ್ಯ ಬಿ.ಎಸ್. ಅನಂತಕುಮಾರ್ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ವಿಚಾರಣೆಗೊಳಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಅನಂತಕುಮಾರ್ಗೆ ಸರಕಾರದ ಕೃಪಾ ಕಟಾಕ್ಷವಿದೆ ಎಂದು ಟೀಕಿಸಿದ್ದಾರೆ. ನಿಯಮ ಬಾಹಿರವಾಗಿ ಹಣ ಹೊಂದಿದ್ದರೂ ಬಂಧನಕ್ಕೆ ಒಳಪಡಿಸದೆ ಇರುವದನ್ನು ಗಮನಿಸಿದರೆ ಹಲವು ಸಂಶಯಗಳು ವ್ಯಕ್ತವಾಗುತ್ತಿವೆ. ಮುಂದಿನ ಚುನಾವಣಾ ವೆಚ್ಚಕ್ಕಾಗಿ ತಳಮಟ್ಟ ದಿಂದಲೇ ಭ್ರಷ್ಟಾಚಾರ ನಡೆಸಲು ಸ್ವತ: ರಾಜ್ಯ ಕಾಂಗ್ರೆಸ್ ಸರಕಾರವೇ ಪರೋಕ್ಷವಾಗಿ ಆದೇಶ ಹೊರಡಿಸಿ ದಂತೆ ಕಂಡು ಬರುತ್ತಿದ್ದು, ಈಗಾಗಲೇ 5 ಕೋಟಿಗೂ ಅಧಿಕ ಹಣ ಹೊಂದಿ ಅಮಾನತುಗೊಂಡಿರುವ ಅಧಿಕಾರಿಗಳೇ ಇದಕ್ಕೆ ಸಾಕ್ಷಿಯಾಗಿ ದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಸರಕಾರದ ಚಾಳಿ ಕೊಡಗು ಕಾಂಗ್ರೆಸ್ಸಿನವರೆಗೂ ವ್ಯಾಪಿಸಿದ್ದು, ಕಾಂಗ್ರೆಸ್ ಪಕ್ಷದ ತಾ.ಪಂ ಸದಸ್ಯ ಅನಂತಕುಮಾರ್ 2000 ಮುಖ ಬೆಲೆಯ 35 ಲಕ್ಷಕ್ಕೂ ಅಧಿಕ ಹಣದೊಂದಿಗೆ ರೆಸಾರ್ಟ್ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅಧಿಕಾರಿಗಳನ್ನು ಅಮಾನತುಗೊಳಿಸಿದಂತೆ ಅನಂತ ಕುಮಾರ್ ಅವರ ಸದಸ್ಯತ್ವವನ್ನು ಕೂಡ ಅನರ್ಹಗೊಳಿಸಬೇಕೆಂದು ಒತ್ತಾಯಿಸಿರುವ ಅವರು ಕಪ್ಪು ಹಣವನ್ನು ಬಿಳಿ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದ ಕಾಂಗ್ರೆಸ್ನ ಬಣ್ಣ ಇದೀಗ ಬಯಲಾಗುತ್ತಿದೆ ಎಂದು ಟೀಕಿಸಿದ್ದಾರೆ.