ಮಡಿಕೇರಿ, ಆ. 6 : ಕಣ್ಣಂಗಾಲ ಗ್ರಾ.ಪಂ.ಅಧ್ಯP ಎರವರ ಈಶ್ವರಿ ಅವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ ಎಂದು ಆರೋಪಿಸಿರುವ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವದರೊಂದಿಗೆ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ನ ರಾಜ್ಯ ಜಂಟಿ ಕಾರ್ಯದರ್ಶಿ ಮಿಟ್ಟು ರಂಜಿತ್, ಕೊಡಗು ಜಿಲ್ಲೆಯ ಇತರೆಡೆ ಎರವರ ಈಶ್ವರಿ ಅವರಂತೆ ಆದಿವಾಸಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು. ಈಶ್ವರಿ ಅವರು ಅನುಭವಿಸಿದ ಶೋಚನೀಯ ಸ್ಥಿತಿಯೇ ಜಿಲ್ಲೆಯ ಆದಿವಾಸಿಗಳ ಸ್ಥಿತಿಗತಿಗೆ ಸಾಕ್ಷಿಯಾಗಿದೆ. ಈಶ್ವರಿ ಅವರು ಗ್ರಾ.ಪಂ.ಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭ ಗೋಪಾಲ ಕೃಷ್ಣ ಅವರ ಒತ್ತಡದಿಂದ ಕೆಲವು ಚೆಕ್ಗಳಿಗೆ ಸಹಿ ಹಾಕಿದ್ದು, ಪ್ರತಿಯೊಂದು ಲೆಕ್ಕಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಮಿಟ್ಟು ರಂಜಿತ್ ಒತ್ತಾಯಿಸಿದರು. ಗೋಪಾಲ ಕೃಷ್ಣ ಅವರಿಗೆ ಪರೋಕ್ಷವಾಗಿ ಕೆಲವು ಅಧಿಕಾರಿಗಳು ಬೆಂಬಲ ನೀಡಿರುವ ಶಂಕೆ ಇದೆ ಎಂದು ಆರೋಪಿಸಿರುವ ಅವರು ಮತ್ತಷ್ಟು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಪ್ರಕರಣದ ಕುರಿತು ರಾಜ್ಯ ವ್ಯಾಪಿ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.
ರಕ್ಷಣಾ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷರಾದ ಸಣ್ಣಪ್ಪ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 69 ವರ್ಷಗಳೇ ಆಗಿದ್ದರೂ ಕೊಡಗಿನ ಆದಿವಾಸಿಗಳಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕೂಡ ನೀಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚೆನ್ನಂಗಿ ಗ್ರಾಮ ವ್ಯಾಪ್ತಿಯಲ್ಲಿ ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ ಗಿರಿಜನರು ಹೀನಾಯ ಸ್ಥಿತಿಯಲ್ಲಿದ್ದಾರೆ. ಗಿರಿಜನರ ಅಭಿವೃದ್ಧಿಗಾಗಿ ಇರುವ ಯೋಜನೆಗಳು ಯಾವದೂ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು ಅರ್ಹ ಫಲಾನುಭವಿಗಳು ನೀಡಿದ ಅರ್ಜಿಯನ್ನು ಅಧಿಕಾರಿಗಳು ವಿಲೇವಾರಿ ಮಾಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬೇಡಿಕೆಗಳು : ಕರ್ನಾಟಕ ಸರ್ಕಾರ ಪ್ರತಿ ವರ್ಷ ವಿಶ್ವ ಆದಿವಾಸಿ ದಿನದಂದು ಆದಿವಾಸಿ ಸಾಧಕರನ್ನು ಗುರುತಿಸಿ “ಆದಿವಾಸಿ ಸಿರಿ” ಎಂಬ ಹೆಸರಿನಡಿ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಪಶ್ಚಿಮಘಟ್ಟ ಪ್ರದೇಶವನ್ನು ನಕ್ಸಲ್ರಿಂದ ಮುಕ್ತಗೊಳಿಸಲು ವಿಶೇಷ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು, ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೂಡಿರುವ ಸುಳ್ಳು ಮೊಕದ್ದಮೆಗಳನ್ನು ಸರ್ಕಾರ ಹಿಂಪಡೆಯಬೇಕು.
ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ಅಥವಾ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ಆದಿವಾಸಿ ವಿಶ್ವ ವಿದ್ಯಾಲಯ ಸ್ಥಾಪಿಸಿ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅನುಸೂಚಿತ ಬುಡಕಟ್ಟು ಇತರೆ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006 ಮತ್ತು ನಿಯಮಗಳು 2009 ತಿದ್ದುಪಡಿ ಅರಣ್ಯ ಕಾಯ್ದೆಯನ್ನು ಮೂಲ ಆದಿವಾಸಿಗಳ ತಜ್ಞರ ಮತ್ತು ಕರ್ನಾಟಕ ಲ್ಯಾಂಪ್ಸ್ ಮಹಾಮಂಡಳಿ ಮೈಸೂರು ಇವರನ್ನು ಒಳಗೊಂಡ ಸಮಿತಿ ರಚಿಸಿ ಅನುಷ್ಠಾನಗೊಳಿಸಬೇಕು. ಆದಿಮ ಬುಡಕಟ್ಟಿನ ಲಕ್ಷಣವುಳ್ಳ ಕರ್ನಾಟಕದ ಆದಿವಾಸಿಗಳನ್ನು ಭಾರತ ಆದಿಮ ಬುಡಕಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
ಶೈಕ್ಷಣಿಕವಾಗಿ ಆದಿವಾಸಿಗಳನ್ನು ಉನ್ನತೀಕರಿಸಲು ಗಿರಿಜನ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಇಂತಹ ಶಾಲೆಗಳಲ್ಲಿ ಕನಿಷ್ಟ ಶೇ. 50 ರಷ್ಟು ಶಿಕ್ಷಕರನ್ನು ಖಾಯಂ ಆಗಿ ಮೂಲ ಆದಿವಾಸಿಗಳನ್ನು ನೇಮಿಸಬೇಕು. ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕವಾದ ಬುಡಕಟ್ಟು ಸಚಿವಾಲಯ ಸ್ಥಾಪಿಸಬೇಕು. ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲಿ ಆದಿವಾಸಿಗಳಿಗೆ ಕಾಯ್ದಿರಿಸಿದ ಅನುದಾನದಲ್ಲಿ ಆದಿವಾಸಿ ಭವನ ಎಂಬ ಹೆಸರಿನ ಭವನಗಳನ್ನು ನಿರ್ಮಿಸಬೇಕು. ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿಯ ಮೈಸೂರು ಒಳಗೊಂಡಂತೆ ಇವರ ವ್ಯಾಪ್ತಿಯಲ್ಲಿರುವ ರಾಜ್ಯದ ಎಲ್ಲಾ ಮೂಲ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ(ಲ್ಯಾಂಪ್ಸ್) ಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಬೇಕು. ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘಗಳು ಕಿರು ಅರಣ್ಯ ಉತ್ಪನ್ನಗಳಿಗೆ ಬೇರೆ ಬೇರೆ ರಾಜ್ಯಗಳು ಬೆಂಬಲ ಬೆಲೆ ನೀಡುವಂತೆ ಕರ್ನಾಟಕ ಸರ್ಕಾರವು ನೀಡಬೇಕು. ಮೂಲ ಬುಡಕಟ್ಟುಗಳಾದ ಸೋಲಿಗ, ಯರವ, ಕಾಡುಕುರುಬ, ಹಲಸರು, ಕೊರಗ, ಜೇನುಕುರುಬ, ಸಮುದಾಯಗಳಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಅದೇ ರೀತಿ ಕೊಡಗಿನಲ್ಲಿ ವಾಸಿಸುವ ಕುಡಿಯ ಬುಡಕಟ್ಟಿಗೂ ಆಹಾರ ಪದಾರ್ಥ ವಿತರಣೆ ಮಾಡಬೇಕು.
ಆದಿವಾಸಿಗಳ ಅರಣ್ಯ ಹಕ್ಕಿನ ಸಂರಕ್ಷಣೆಗಾಗಿ ಬಹು ಸಂಖ್ಯಾತ ಬುಡಕಟ್ಟುಗಳು ವಾಸವಾಗಿರುವ ಪಶ್ಚಿಮ ಘಟ್ಟ ಪ್ರದೇಶವನ್ನು ಅನುಸೂಚಿತ ಬುಡಕಟ್ಟು ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸ ಲಾಗುವದೆಂದು ಪ್ರಮುಖರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಕಾವೇರಮ್ಮ, ಸಂಘಟನಾ ಕಾರ್ಯದರ್ಶಿ ಅನಿತಾ, ಸದಸ್ಯರಾದ ಮಂಜು ಹಾಗೂ ಪ್ರವೀಣ್ ಉಪಸ್ಥಿತರಿದ್ದರು.