ತಾ.10 ರಂದು (ಇಂದು) ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೆಳ್ಳಿಗ್ಗೆ 7.30ಕ್ಕೆ ನಗರದ ಎಲ್ಲಾ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಸಿ.ಸಿ. ನಂದ ತಿಳಿಸಿದ್ದಾರೆ.
ಬೆಳಿಗ್ಗೆ 8.30ಕ್ಕೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, 9 ಗಂಟೆಗೆ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ, ಸಂಜೆ 6.30ಕ್ಕೆ ಆಯುಧ ಪೂಜಾ ಸಮಾರಂಭ, ಅಲಂಕೃತ ವಾಹನಗಳು ಮತ್ತು ವರ್ಕ್ಶಾಪ್ಗಳಿಗೆ ಬಹುಮಾನ ವಿತರಿಸಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ನಟರಾಜ್ ಜಿಗರ್ ತಂಡದಿಂದ ಎಂ.ಕ್ಯೂ. ಡ್ಯಾನ್ಸ್ ಈವೆಂಟ್, ತೆಲುಗು ಡಿ. ಜೂನಿಯರ್ ವಿನ್ನರ್ಸ್ ಹಾಗೂ ಕುಣಿಯೋಣು ಬಾರಾ ಸ್ಕೈಡ್ಯಾನ್ಸ್ನಲ್ಲಿ ಪ್ರಥಮ ಸ್ಥಾನಗಳಿಸಿದ ವರ್ಷಿಣಿ ಅವರಿಂದ ನೃತ್ಯ, ಹಾಸ್ಯದ ಅರಸ ಖ್ಯಾತಿಯ ಮಿಮಿಕ್ರಿ ಗೋಪಿ ಹಾಗೂ ಹಾಸ್ಯ ನಟ ಕೆಂಪೇಗೌಡ ಅವರಿಂದ ಹಾಸ್ಯೋತ್ಸವ, ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಏಳನೇ ತರಗತಿ, ಎಸ್ಎಸ್ಎಲ್ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಗುವದು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಬಿ.ಡಿ. ರಘು ಮತ್ತು ಮಾಜೀ ಸೈನಿಕ ಎನ್.ಕೆ. ತಮ್ಮಯ್ಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಕೆ. ಪ್ರಕಾಶ್ ಅವರುಗಳನ್ನು ಸನ್ಮಾನಿಸಲಾಗುವದು.
ಬೆಳಿಗ್ಗೆ 9.30ಕ್ಕೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮತ್ತೋರ್ವ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಮಾಜೀ ಸಚಿವ ಬಿ.ಎ. ಜೀವಿಜಯ, ಮಾಜೀ ಎಂಎಲ್ಸಿ ಎಸ್.ಜಿ. ಮೇದಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಆಯುಧ ಪೂಜಾ ಸಮಾರಂಭದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜೀ ಸಚಿವ ಟಿ. ಜಾನ್, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಒಟ್ಟಾರೆ ಪ್ರಸಕ್ತ ಸಾಲಿನ ಆಯುಧ ಪೂಜೋತ್ಸವಕ್ಕೆ ಸೋಮವಾರಪೇಟೆ ಸಜ್ಜುಗೊಂಡಿದ್ದು, ಭಾನುವಾರ ಸಂಜೆ ವೇಳೆಗೆ ನಗರದಲ್ಲಿ ಹೆಚ್ಚಿನ ಜನ ಸಂಚಾರ ಕಂಡುಬಂತು. ಪೂಜೋತ್ಸವಕ್ಕೆ ಬೇಕಾದ ವಸ್ತುಗಳ ಖರೀದಿ ಜೋರಾಗಿದ್ದರೆ, ಆಯುಧ ಪೂಜೆಗೆ ಅಗತ್ಯ ಎನಿಸಿರುವ ಕುಂಬಳಕಾಯಿ, ಹೂವು, ಕಬ್ಬಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.