ಸಿದ್ದಾಪುರ, ಡಿ. 4: ಸಮೀಪದ ನೆಲ್ಯಹುದಿಕೇರಿಯ ಆಂಗ್ಲೋ ವರ್ನಾಕುಲರ್ ಶಾಲೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ‘ಬೆಳ್ಳಿ ಹಬ್ಬ’ ಅದ್ಧೂರಿಯಿಂದ ಜರುಗಿತ್ತು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್, ಖಾಸಗಿ ವ್ಯವಸ್ಥೆಯಲ್ಲಿ ಶಾಲೆಯು 25 ವರ್ಷವನ್ನು ಪೂರೈಸಿರುವದು ಸಾಹಸವಾಗಿದೆ. ಮಕ್ಕಳು ತಮ್ಮ ತಂದೆ, ತಾಯಿ ಕುಟುಂಬದವರಂತೆ ಶಾಲೆಯ ಮೇಲೂ ಅಭಿಮಾನ ಇಟ್ಟುಕೊಳ್ಳಬೇಕು. ಪೋಷಕರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿ, ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಈ ಹಿಂದೆ ಅಲ್ಪಸಂಖ್ಯಾತರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರು. ಆದರೇ ಇದೀಗ ಉನ್ನತ ವ್ಯಾಸಂಗ ಸೇರಿದಂತೆ ಎಲ್ಲರೂ ವಿದ್ಯೆ ಪಡೆಯುತ್ತಿರುವುದ ಸಂತಸದ ವಿಷಯವಾಗಿದೆ ಎಂದರು.

ಸೋಮವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಕಳೆದ 25 ವರ್ಷಗಳಿಂದ ಪುಟ್ಟ ಗ್ರಾಮದಲ್ಲಿ ಗ್ರಾಮಸ್ಥರಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯು, ಕಳೆದ 9 ವರ್ಷಗಳಿಂದ 10ನೇ ತರಗತಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುತ್ತಿದೆ. ಶಾಲೆಯ ಆಡಳಿತ ಮಂಡಳಿಯೊಂದಿಗೆ ಶಿಕ್ಷಕ ವೃಂದದವರ ಪರಿಶ್ರಮ ಮೆಚ್ಚುವಂತದ್ದು. ದೇಶದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ನಾಲ್ಕು ಗೋಡೆಗಳಲ್ಲಿ ನೀಡುವ ವಿದ್ಯೆ ದೇಶವನ್ನು ಬದಲಿಸುತ್ತದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ವೆಂಕಟೇಶ್ ಮಾತನಾಡಿ, ದೇಶ ಪ್ರಗತಿ ಹೊಂದಲು ವಿದ್ಯಾಭ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಆಲೆಯಲ್ಲಿ ಹೆಚ್ಚು ಅಂಕ ಗಳಿಸುವದರೊಂದಿಗೆ ಜವನದಲ್ಲಿ ಉತ್ತಮ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಜಕರಿಯ ವಹಿಸಿದ್ದರು. ವೇದಿಕೆಯಲ್ಲಿ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಕಾವೇರಪ್ಪ, ಸಮಾಜ ಸೇವಕ ಜೋಸೆಫ್ ಶ್ಯಾಂ, ಶಾಲೆಯ ಮೊದಲ ವಿದ್ಯಾರ್ಥಿ ನಿರೋಶ ಪ್ರಿಯ, ಬೆಳ್ಳಿ ಹಬ್ಬದ ವರ್ಷ ಸೇರ್ಪಡೆಗೊಂಡ ವಿದ್ಯಾರ್ಥಿನಿ ವಿಷ್ಣುಪ್ರಿಯ ಇದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆಡಳಿತ ಮಂಡಳಿ ಕಾರ್ಯದರ್ಶಿ ಮಹಮ್ಮದ್ ಮಣಿ ಸ್ವಾಗತಿಸಿ, ಶಿಕ್ಷಕಿ ವಿಶಾಲಾಕ್ಷಿ ನಿರೂಪಿಸಿ, ಮುಖ್ಯೋಪಾಧ್ಯಾಯರಾದ ಲಿಲ್ಲಿ ವಂದಿಸಿದರು.

ತಾ. 1 ರಂದು ಕಾರ್ಯಕ್ರಮ ನೆಲ್ಯಹುದಿಕೇರಿ ವಿ.ಎಸ್.ಎಸ್.ಎನ್ ಬ್ಯಾಂಕ್‍ನ ಅಧ್ಯಕ್ಷ ಕೆ.ಎ.ಬೋಪಯ್ಯ ಉದ್ಘಾಟಿಸಿದರು.