ಭಾಗಮಂಡಲ, ಆ. 29: ಯುವಕರಿಬ್ಬರು ತಮ್ಮ ಮೇಲೆ ಅತ್ಯಾಚಾರವೆಸಗಿರುವದಾಗಿ ವಿದ್ಯಾರ್ಥಿನಿಯರಿಬ್ಬರು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಫೋಕ್ಸೋ ಹಾಗೂ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯೋರ್ವನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾಲೇಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಚೇರಂಬಾಣೆ ಖಾಸಗಿ ಜೂನಿಯರ್ ಕಾಲೇಜೊಂದರ ಶಾಲಾ ವಾಹನ ಚಾಲಕ ತೊಟ್ಟಿಲುಕುಂಞÂ ನಿವಾಸಿ ದಿನೇಶ್ ರೈ ಹಾಗೂ ಕೊಳಗದಾಳು ಗ್ರಾಮದ ನವೀನ್ ಎಂಬವರು ತಮ್ಮಿಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯೋರ್ವಳು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಪ್ರಕರಣ ನಡೆದು ಒಂದು ವಾರಗಳ ಬಳಿಕ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನಾಂಕ 20 ರಂದು ಭಾಗಮಂಡಲ ಲಾಡ್ಜ್‍ವೊಂದರಲ್ಲಿ ದಿನೇಶ್ ರೈ ಎರಡು ರೂಂ ಬಾಡಿಗೆಗೆ ಪಡೆದಿದ್ದು, ತನ್ನ ಸ್ನೇಹಿತರು ಸಂದರ್ಶನವೊಂದರಲ್ಲಿ ಭಾಗವಹಿಸಲು ಬರುವವರಿದ್ದಾರೆ ಎಂದು ತಿಳಿಸಿದ್ದರು. ಅದರಂತೆ ಅಂದು ಶನಿವಾರವಾದ್ದ ರಿಂದ ಮಧ್ಯಾಹ್ನ ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದು ಬಿಟ್ಟ ಬಳಿಕ ನಾಲ್ಕು ಮಂದಿಯೂ ಭಾಗಮಂಡಲ ಸೇರಿಕೊಂಡಿದ್ದಾರೆ.

ವಿದ್ಯಾರ್ಥಿನಿಯರು ತಮ್ಮ ಸ್ನೇಹಿತೆಯ ಹುಟ್ಟು ಹಬ್ಬವಿದೆ. ರಾತ್ರಿ ಅಲ್ಲೇ ಉಳಿದು

(ಮೊದಲ ಪುಟದಿಂದ) ಮಾರನೇ ದಿನ ಬರುತ್ತೇವೆಂದು ಮನೆಯವರಲ್ಲಿ ತಿಳಿಸಿ ಯುವಕರೊಂದಿಗೆ ತೆರಳಿದ್ದರು. ಅಂದು ರಾತ್ರಿ ಲಾಡ್ಜ್‍ನಲ್ಲಿಯೇ ಉಳಿದು ಮಾರನೇ ದಿನ ಮನೆಗೆ ಬಂದಿದ್ದಾರೆ. ಅಂದು ಭಾನುವಾರವಾಗಿದ್ದು, ಮಾರನೇ ದಿನ ಸೋಮವಾರ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದ್ದು, ಕಾಲೇಜಿನಲ್ಲಿ ಗುಸುಗುಸು ಆರಂಭವಾಗಿದೆ. ಬೇರೆ ವಿದ್ಯಾರ್ಥಿಗಳು ಗುಸುಗುಸು ಮಾತನಾಡುತ್ತಿರುವದನ್ನು ಗಮನಿಸಿದ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಪ್ರಕರಣ ತಿಳಿದು ಬಂದಿದ್ದು, ಬಳಿಕ ಆ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರ ಕೊಠಡಿಗೆ ಕರೆಸಿ ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಗದರಿಸಿ ಪೋಷಕರನ್ನು ಕರೆಯಿಸಿ ಮಕ್ಕಳಿಗೆ ಬುದ್ಧಿವಾದ ಹೇಳುವಂತೆ ತಿಳಿಸಿ ಪೋಷಕರೊಂದಿಗೆ ಕಳುಹಿಸಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಒಬ್ಬಾತನ ಹೆಸರನ್ನು ವಿದ್ಯಾರ್ಥಿನಿ ಯರು ದಿನು ಎಂದು ಹೇಳಿದ್ದು, ಮತ್ತೊಂದು ಶಾಲಾ ವಾಹನದ ಚಾಲಕ ದಿನು (ದಿನೇಶ್) ಎಂಬಾತನನ್ನು ಪ್ರಾಂಶುಪಾಲರು ಕರೆಸಿ ಗದರಿಸಿದ್ದಾರೆ ಎನ್ನಲಾಗಿದೆ. ದಿನುವನ್ನು ಗದರಿಸಿದ ಮಾಹಿತಿ ಸಾರ್ವಜನಿಕರಿಗೆ ತಲಪುತ್ತಿದ್ದಂತೆ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ. ಇದೇ ಸಂದರ್ಭ ವಿದ್ಯಾರ್ಥಿನಿ ಯೋರ್ವಳು ಭಾಗಮಂಡಲ ಠಾಣೆಗೆ ತೆರಳಿ ಅತ್ಯಾಚಾರ ಪ್ರಕರಣದ ದೂರು ದಾಖಲಿಸುತ್ತಾಳೆ. ಪ್ರಕರಣದಲ್ಲಿ ಸಂಬಂಧವೇ ಇಲ್ಲದ ತನ್ನ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಿನು ಕೂಡ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಈ ಎಲ್ಲಾ ಘಟನೆಗಳ ಮಧ್ಯೆ ದಿನೇಶ್ ರೈ ತಾ. 27ರವರೆಗೆ ಶಾಲಾ ವಾಹನದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗುತ್ತಾರೆ.

ಚಾಲಕ ದಿನೇಶ್ ರೈ ಎಂಬಾತನನ್ನು ಬಚಾವ್ ಮಾಡುವ ಉದ್ದೇಶದಿಂದ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ದಿನುವನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಕಾಲೇಜು ಎದುರು ಜಮಾಯಿಸಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಆಡಳಿತ ಮಂಡಳಿ ಪದಾಧಿಕಾರಿಗಳು ರಾಜೀನಾಮೆ ನೀಡುವಂತೆಯೂ ಹಾಗೂ ಪ್ರಾಂಶುಪಾಲರನ್ನು ವಜಾ ಮಾಡುವಂತೆಯೂ ಆಗ್ರಹಿಸಿದರು.

ಪ್ರತಿಭಟನೆ ಸಂದರ್ಭ ಭಾಗಮಂಡಲ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಈ ಮಧ್ಯೆ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯೋರ್ವಳು ತಾನು ನವೀನ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನನ್ನು ಮದುವೆಯಾಗುವದಾಗಿ ಠಾಣೆಯಲ್ಲಿ ತಿಳಿಸಿದ್ದಾಳೆ ಎನ್ನಲಾಗಿದೆ.

ಆರೋಪಿ ದಿನೇಶ್ ರೈ ವಿವಾಹಿತನಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆರೋಪಿಗಳಿಬ್ಬರು ನಾಪತ್ತೆಯಾಗಿದ್ದು, ಆರೋಪಿಗಳ ವಿರುದ್ಧ ಅತ್ಯಾಚಾರ ಹಾಗೂ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಭಾಗಮಂಡಲ ಠಾಣಾಧಿಕಾರಿ ಎಂ.ಕೆ. ಸದಾಶಿವ ಅವರು ತಿಳಿಸಿದ್ದಾರೆ.