ಮಡಿಕೇರಿ, ಸೆ. 7: ಯುವತಿ ಯೋರ್ವಳನ್ನು ವಿವಾಹವಾಗುವದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಯುವತಿ ಮಗುವಿಗೆ ಜನ್ಮ ನೀಡಿದ ನಂತರ ವಂಚಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಗರಗಂದೂರು ಗ್ರಾಮದಲ್ಲಿ 2009ರಲ್ಲಿ ಅಲ್ಲಿನ ಜಂಬೂರು ಗ್ರಾಮ ನಿವಾಸಿ, ಆಟೋ ಚಾಲಕ ಕೆ.ಕೆ. ಶಿವರಾಮ ಎಂಬಾತ ಪರಿಶಿಷ್ಟ ಜಾತಿಗೆ ಸೇರಿದ ಯುವತಿ ಯೋರ್ವಳನ್ನು ವಿವಾಹ ವಾಗುವದಾಗಿ ನಂಬಿಸಿ, ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆ ಪರಿಶಿಷ್ಟ ಜಾತಿಗೆ ಸೇರಿದ್ದವಳೆಂದು ಹೀಯಾಳಿಸಿ, ಮದುವೆಯಾಗದೆ ವಂಚಿಸಿದ್ದಾನೆ. ಈ ಬಗ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ) ತಡೆ ಕಾಯ್ದೆ ಅಡಿಯಲ್ಲಿ ಅಪರಾಧವೆಸಗಿರುವದಾಗಿ ದೊರೆತ ಪುಕಾರಿನ ಮೇರೆಗೆ ಸುಂಟಿಕೊಪ್ಪ ಠಾಣಾ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್. ಕೆ.ಜಿ.ಎಂ.ಎಂ. ಮಹಾ ಸ್ವಾಮೀಜಿ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರ ಎಸಗಿದ ಆರೋಪಕ್ಕಾಗಿ 10 ವರ್ಷಗಳ ಕಾರಾಗೃಹ ವಾಸ ಮತ್ತು ರೂ. 10 ಸಾವಿರ ದಂಡ, ವಂಚನೆ ಎಸಗಿದ ಆರೋಪಕ್ಕಾಗಿ 1 ವರ್ಷಗಳ ಕಾರಾಗೃಹ ವಾಸ ಮತ್ತು 1 ಸಾವಿರ ದಂಡ ಹಾಗೂ ಪ.ಜಾ., ಪ.ಪಂ. ದೌರ್ಜನ್ಯ ಕಾಯ್ದೆಯಡಿ ಅಪರಾಧಕ್ಕಾಗಿ 5 ವರ್ಷ ಕಾರಾಗೃಹ ವಾಸ ಹಾಗೂ ರೂ. 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪಾವತಿಯಾಗುವ ದಂಡದ ಹಣದಲ್ಲಿ ರೂ. 15 ಸಾವಿರವನ್ನು ನೊಂದ ಮಹಿಳೆಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್ ಖಾನ್ ವಾದ ಮಂಡಿಸಿದರು.