ಕುಶಾಲನಗರ, ಸೆ. 1: ಪ್ರಿಯಕರನೊಂದಿಗೆ ಸೇರಿ ಅತ್ಯಾಚಾರದ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ ವಿಧವೆಯೊಬ್ಬಳು ಇದೀಗ ಪೊಲೀಸರ ಅತಿಥಿಯಾಗಿ ರುವ ಘಟನೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ತಿಂಗಳು 10 ರಂದು ಕೂಡುಮಂಗಳೂರಿನ ನವಗ್ರಾಮದ ಮಹಿಳೆಯೊಬ್ಬಳು ತನ್ನ ಮೇಲೆ ಆಟೋ ಚಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವದಾಗಿ ಕಥೆ ಕಟ್ಟಿ ಪೊಲೀಸರನ್ನು ಹಾಗೂ ಜನರನ್ನು ನಂಬಿಸಿ ಪತ್ರಿಕೆಗಳಲ್ಲಿ ವರದಿಯಾಗುವಂತೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಿ ಓರ್ವ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕುಶಾಲನಗರದಿಂದ ಕೂಡುಮಂಗಳೂರು ಕಡೆಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ತನ್ನನ್ನು ಅಪಹರಿಸಿ ಯಡವನಾಡು ಅರಣ್ಯ ಬಳಿ ಅತ್ಯಾಚಾರಕ್ಕೆ ಯತ್ನಿಸಿ ಚಿನ್ನಾಭರಣ ದೋಚಿದ್ದಾರೆ. ಯಾರೋ ಇಬ್ಬರು ತನ್ನನ್ನು ರಕ್ಷಿಸಿ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್ ನೇತೃತ್ವದ ತಂಡ ಹಲವು ಆಟೋ ಚಾಲಕರನ್ನು ವಶಕ್ಕೆ ಪಡೆಯುವದರೊಂದಿಗೆ ವಿಚಾರಣೆ ಕೈಗೊಂಡಿದ್ದರು. ಈ ನಡುವೆ ಆಸ್ಪತ್ರೆಗೆ ದಾಖಲಾದ ಮಹಿಳೆಯ ಮೊಬೈಲ್ ಕರೆಗಳ ಜಾಡು ಹಿಡಿದ ಸಂದರ್ಭ ಸತ್ಯಾಂಶ ಬಯಲಾಗಿದೆ. ಪ್ರಕರಣ ಸಂಭವಿಸಿದೆ ಎನ್ನಲಾದ ಸಂದರ್ಭದಲ್ಲಿ ಮಹಿಳೆ ಬೈಲುಕೊಪ್ಪೆಯ ವ್ಯಾಪ್ತಿಯಲ್ಲಿ ಇಡೀ ದಿನ ಕಳೆದಿರುವ ಬಗ್ಗೆ ಮಾಹಿತಿ ದೊರೆತ ಬೆನ್ನಲ್ಲೇ ಬೈಲುಕೊಪ್ಪೆಯ ಯುವಕನೊಬ್ಬನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ವಿಧವಾ ಮಹಿಳೆ ಬೈಲುಕೊಪ್ಪೆಯ ಯುವಕನೊಂದಿಗೆ ಸ್ನೇಹ ಬೆಳೆಸಿದ್ದು, ವ್ಯವಹಾರಕ್ಕೆಂದು ತನ್ನ ಒಡವೆಗಳನ್ನು ನೀಡಿದ್ದು, ನಂತರ ಮನೆಯವರಿಗೆ ಸುಳ್ಳು ಹೇಳುವ ಉದ್ದೇಶದೊಂದಿಗೆ ಈ ನಾಟಕ ಸೃಷ್ಟಿ ಮಾಡಿದ್ದಾಳೆ ಎಂದು ಪೊಲೀಸರು ಹಾಗೂ ಆರೋಪಿ ಮಹಿಳೆಯ ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ. ಇದರೊಂದಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ ಒಡ್ಡುತ್ತಿದ್ದಾಳೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ವಿಧವಾ ಮಹಿಳೆಯ ಪತಿ ಆಟೋ ಚಾಲಕನಾಗಿದ್ದು, ಇತ್ತೀಚೆಗಷ್ಟೆ ಮೃತಪಟ್ಟಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿ ಬೈಲುಕೊಪ್ಪೆಯ ಶೇಖರ ಎಂಬ ಯುವಕ ಹಾಗೂ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಆಟೋ ಚಾಲಕರ ಮೇಲೆ ಅತ್ಯಾಚಾರದ ಹೆಸರಿನಲ್ಲಿ ವಿನಾಃಕಾರಣ ಆರೋಪ ಹೊರಿಸಿದ ಮಹಿಳೆಯ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷÀ ಮಹೇಶ್ ಮತ್ತು ಪದಾಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ.