ಸೋಮವಾರಪೇಟೆ, ಜ. 15: ಕಳೆದ ಬಾರಿಯ ಎರಡು ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿ, ವಿಧಾನ ಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸೋಮವಾರಪೇಟೆಯ ಕುಶಾಲನಗರ ಎಪಿಎಂಸಿಯಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೂರೂ ಪಕ್ಷಗಳು ಅಧ್ಯಕ್ಷ ಗಾದಿಗೇರುವ ಕಸರತ್ತು ನಡೆಸುತ್ತಿವೆ.ಜೆಡಿಎಸ್ ಮುಖಂಡ, ಮಾಜಿ ಸಚಿವ ಬಿ.ಎ. ಜೀವಿಜಯ ಅವರು ತಮ್ಮ ಪ್ರಾಬಲ್ಯ ಮೆರೆದಿದ್ದು, ಬಿಜೆಪಿಗೆ ಜೆಡಿಎಸ್ ಎದುರಾಳಿ ಎಂಬದನ್ನು ಸಾಬೀತುಪಡಿಸಿದ್ದಾರೆ. ಕಳೆದ ಸಾಲಿನಲ್ಲಿ 7 ಸ್ಥಾನಗಳನ್ನು ಪಡೆದು ಎರಡು ಅವಧಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದ ಬಿಜೆಪಿ, ಈ ಬಾರಿ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವದು ಬಹುತೇಕ ಖಚಿತಪಡಿಸಿಕೊಂಡಿದೆ.
ಕಾಂಗ್ರೆಸ್ ಈ ಬಾರಿ 2 ಸ್ಥಾನಗಳನ್ನು ಪಡೆದಿದ್ದರೂ ಸಹ ನಾಮನಿರ್ದೇಶಿತ ಸದಸ್ಯರನ್ನು ನೆಚ್ಚಿಕೊಂಡು ಅದೃಷ್ಟದಿಂದ ಅಧಿಕಾರದ ಗದ್ದುಗೆಯೇರಲು ತಂತ್ರ ಹೆಣೆಯುತ್ತಿದೆ. ಈ ಮಧ್ಯೆ ಜೆಡಿಎಸ್ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಕಸರತ್ತು ನಡೆಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವದೆ ಮೊದಲ ಆದ್ಯತೆ ಎಂದು ಹೇಳುವದರ ಮೂಲಕ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವದು ಬಹುತೇಕ ಖಚಿತವಾಗಿದೆ.
ಬಿಜೆಪಿ ಹೊರಗಿಡಲು ಆದ್ಯತೆ-ಜೀವಿಜಯ: ಜೆಡಿಎಸ್, ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಬಗ್ಗೆ ಚರ್ಚೆ ನಡೆದಿಲ್ಲ. ಅಧಿಕಾರದಿಂದ ಬಿಜೆಪಿಯನ್ನು ಹೊರಗಿಡುವದಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಜೆಡಿಎಸ್ ರೈತರು, ಬಡವರು, ದೀನದಲಿತರ ಪರ ಎಂಬದು ಜನರಿಗೆ ಮನವರಿಕೆಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈ ಬಲಪಡಿಸಲು ಈ ಬಾರಿ ಜೆಡಿಎಸ್ಗೆ ಮತ ನೀಡಿದ್ದಾರೆ. ಇನ್ನು ಕೆಲವು ಸ್ಥಾನಗಳನ್ನು ಅಲ್ಪ ಮತಗಳ ಅಂತರದಲ್ಲಿ ಕಳೆದುಕೊಂಡಿದ್ದೇವೆ. ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಸಾಲವನ್ನು 24 ಗಂಟೆಯೊಳಗೆ ಮನ್ನಾ ಮಾಡುತ್ತೇವೆ ಎಂದು ನಾಯಕರು ಹೇಳಿರುವದು ಕೃಷಿ ವಲಯದಲ್ಲಿ ಆಶಾಭಾವನೆ ಮೂಡಿಸಿದೆ ಎಂದು ಮಾಜೀ ಸಚಿವ, ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಹೇಳಿದ್ದಾರೆ.
ವಿಪಕ್ಷವಾಗಿ ಕೆಲಸ ಮಾಡಲೂ ಸಿದ್ಧ: ಎಂ.ಎನ್. ಕೊಮಾರಪ್ಪ: ಎಪಿಎಂಸಿ ಚುನಾವಣೆಯಲ್ಲಿ ಹಣದ ಹೊಳೆ ಹರಿದ ಪರಿಣಾಮ ಕೆಲ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಳ್ಳಬೇಕಾಯಿತು. ಕಳೆದ ಬಾರಿಗಿಂತ ಅಧಿಕ ಸ್ಥಾನಗಳನ್ನು ಗಳಿಸಲು ಪಕ್ಷದ ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಹೊಂದಾಣಿಕೆಗೆ ನಾವಾಗಿಯೇ ಮುಂದಾಗುವದಿಲ್ಲ. ಬೇರೆ ಪಕ್ಷದವರು ಆಸಕ್ತಿ ವಹಿಸಿದರೆ ಚರ್ಚಿಸಲಾಗುತ್ತದೆ. ವಿಪಕ್ಷವಾಗಿ ಕೆಲಸ ನಿರ್ವಹಿಸಲು ಸದಸ್ಯರು ಸಿದ್ದರಿದ್ದಾರೆ ಎಂದು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ ಹೇಳಿದ್ದಾರೆ.
ಅಧಿಕಾರ ಹಿಡಿಯೋದು ನಾವೇ-ಲೋಕೇಶ್: ಕಳೆದ ಬಾರಿ 2 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್, 3 ಮಂದಿ ಸರ್ಕಾರದ ನಾಮಕರಣ ಸದಸ್ಯರು ಹಾಗೂ ಇತರ ಸದಸ್ಯರ ಸಹಕಾರದಿಂದ ಮೂರನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪಡೆದು ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಈ ಬಾರಿಯೂ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು, ರೈತರಿಗೆ ಸೌಲಭ್ಯ ಒದಗಿಸುತ್ತೇವೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಸ್ಥಾನ ಹೊಂದಾಣಿಕೆಯ ಬಗ್ಗೆ ಪಕ್ಷದ ಹಿರಿಯರು ಚರ್ಚಿಸಲಿದ್ದಾರೆ. ಎರಡು ಸ್ಥಾನ ಪಡೆದಿದ್ದರೂ ಅಧಿಕಾರ ನಡೆಸುವದು ಕಾಂಗ್ರೆಸ್ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದ್ದಾರೆ.