ಕೂಡಿಗೆ, ಆ. 16: ಹಾರಂಗಿ ಅಣೆಕಟ್ಟೆಯ ಮೇಲ್ಭಾಗದ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ ಸೋಮವಾರ ರಾತ್ರಿ ಕಟ್ಟೆಗೆ ಹೆಚ್ಚು ನೀರು ಹರಿದು ಬಂದಿದ್ದು, ಇಂದು ಬೆಳಗ್ಗಿನ ಜಾವ 2 ಗಂಟೆಗೆ ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ನದಿಗೆ 4200 ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗಿದೆ.ಮೈಸೂರು ಮತ್ತು ಹಾಸನ ಜಿಲ್ಲೆಯ ಕೊನೆಯ ಭಾಗದ ರೈತರಿಗೆ ಅನುಕೂಲವಾಗುವಂತೆ ನೀರನ್ನು ಹರಿಸಲಾಗಿದೆ. ನೀರು ನದಿಯಲ್ಲಿ ಹೆಚ್ಚು ಹರಿಯುತ್ತಿರುವದರಿಂದ ಕೂಡಿಗೆಯ ಹಾಸನ-ಕುಶಾಲನಗರ ಮುಖ್ಯ ರಸ್ತೆಯಲ್ಲಿರುವ ಸೇತುವೆಯ ಹತ್ತಿರ ಹಾರಂಗಿ ನದಿಯು ತುಂಬಿ ಹರಿಯುತ್ತಿದೆ. ಕಾವೇರಿ-ಹಾರಂಗಿ ನದಿ ಸೇರುವ ಸ್ಥಳದಲ್ಲಿ ನೀರಿನ ರಭಸ ಹೆಚ್ಚಾಗಿ ನೋಡುಗರಿಗೆ ರೋಮಾಂಚನ ತರಿಸುವಂತಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆಗೆ ನೀರು ಹೆಚ್ಚು ಬರುತ್ತಿರುವದರಿಂದ ಅಣೆಕಟ್ಟೆಗೆ 1 ಅಡಿ ಅಂತರದ ನಿಯಂತ್ರಣವನ್ನು ಇರಿಸಿ, ಹೆಚ್ಚುವರಿ ನೀರನ್ನು ನದಿಯ ಮೂಲಕ ಹರಿಬಿಡಲಾಗುವದು. ಭದ್ರತೆಯ ದೃಷ್ಟಿಯಿಂದ ನೀರಿನ ಸಂಗ್ರಹದ ಮಟ್ಟವನ್ನು ಗಮನದಲ್ಲಿರಿಸಿಕೊಂಡು ನದಿಗೆ ನೀರನ್ನು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆಯ ಮೇಲ್ವಿಚಾರಕ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.