ಶ್ರೀಮಂಗಲ, ಜು. 30: ಟಿ.ಶೆಟ್ಟಿಗೇರಿ ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹಕ್ಕೆ ಸರಬರಾಜು ಮಾಡಿದ ಆಹಾರ ಧಾನ್ಯ ತೀವ್ರ ಕಳಪೆ ಮಟ್ಟದಲ್ಲಿದ್ದು, ಹುಳ ಹುಪ್ಪಟೆ ಕಾಣಿಸಿಕೊಂಡಿದ್ದು, ಶನಿವಾರ ಶಾಲೆಗೆ ಭೇಟಿ ನೀಡಿದ ಜನ ಪ್ರತಿನಿಧಿಗಳ ಗಮನಕ್ಕೆ ಬಂದು ಜಿಲ್ಲಾ ಆಹಾರ ಆಧಿಕಾರಿ ರಾಜಶೇಖರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜನಪ್ರತಿನಿಧಿಗಳು ಕೂಡಲೇ ಗುಣ ಮಟ್ಟದ ಹಾಗೂ ತಾಜಾ ಆಹಾರ ಧಾನ್ಯಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳವಂತೆ ತಾಕೀತು ಮಾಡಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಆಹಾರ ಧಾನ್ಯಗಳ ಗುಣಮಟ್ಟವನ್ನು ಪ್ರತೀ ತಿಂಗಳು ಪರಿಶೀಲಿಸುವಂತೆ ಸೂಚಿಸಿದರು.

ಟಿ.ಶೆಟ್ಟಿಗೇರಿ ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗೆ ಸರಬರಾಜು ಆಗಿರುವ ಆಹಾರ ಧಾನ್ಯವಾದ ಕಡ್ಲೆ ಬೇಳೆ, ಕಡಲೆ, ತೊಗರಿ ಬೇಳೆಗಳಲ್ಲಿ ಹುಳ ಹುಪ್ಪಟೆ ಕಾಣಿಸಿಕೊಂಡಿದ್ದು, ಬೇಳೆಗಳನ್ನು ತೂತು ಮಾಡಿವೆ. ಇದರಿಂದ ಆಹಾರ ಧಾನ್ಯ ದಾಸ್ತಾನಿರಿಸಿರುವ ಕೋಣೆಯ ಅಕ್ಕಿ ಚೀಲಗಳಿಗೂ ಹುಳ ಹುಪ್ಪಟೆಗಳು ನುಗ್ಗಿದ್ದು ಗೋಡೆಗಳಲ್ಲಿ ಹರಿದಾಡುತ್ತಿವೆ. ಇದನ್ನು ಕಂಡ ಸ್ಥಳೀಯ ಜನರು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ತಾ.ಪಂ. ಸದಸ್ಯರಗಳಾದ ಪೊಯಿಲೇಂಗಡ ಪಲ್ವಿನ್ ಪೂಣಚ್ಚ, ಸರೋಜ, ಟಿ-ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಭೇಟಿ ನೀಡಿ ಜಿಲ್ಲಾ ಆಹಾರ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಮಾತನಾಡಿದ ಆಹಾರ ಅಧಿಕಾರಿ ರಾಜಶೇಖರ್ ಅವರು ವೀರಾಜಪೇಟೆ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಅಹಾರ ಧಾನ್ಯವನ್ನು ಏಜೆನ್ಸಿ ಮೂಲಕ ನೀಡಲಾಗಿದೆ. ಆಹಾರ ಧಾನ್ಯ ಕೆಟ್ಟು ಹೋಗಿರುವದನ್ನು ಗಮನಿಸಿಲ್ಲ. ಈ ಅಹಾರ ಧಾನ್ಯ ಬಳಕೆಗೆ ಯೋಗ್ಯವಾಗಿಲ್ಲ ಎಂದು ಹೇಳಿದರು.

ಇದಕ್ಕೆ ಜಿ.ಪಂ. ಸದಸ್ಯ ಶಿವು ಮಾದಪ್ಪ, ಗ್ರಾ.ಪಂ. ಅಧ್ಯಕ್ಷ ಸುಮಂತ್ ಇವರುಗಳು ಕಳಪೆ ಗುಣಮಟ್ಟದ ಆಹಾರ ವಿತರಣೆಯಾಗಿದ್ದು, ಈ ಹಿನೆÀ್ನಲೆಯಲ್ಲಿ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯಾಯರನ್ನು ಹೊಣೆಗಾರರನ್ನಾಗಿ ಮಾಡಿ ಅಧಿಕಾರಿಗಳಾದ ನೀವು ನುಣುಚಿ ಕೊಳ್ಳಬೇಡಿ. ಇಲ್ಲಿ ದಾಸ್ತಾನಿರುವ ಕಳಪೆ ಆಹಾರವನ್ನು ಕೂಡಲೇ ತೆರವು ಮಾಡಿ ತಾಜಾ ಹಾಗೂ ಗುಣಮಟ್ಟದ ಆಹಾರ ಧಾನ್ಯಗಳನ್ನು ಒದಗಿಸಬೇಕು. ಸರಕಾರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇವುಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಮಾಡುವದು ಅಧಿಕಾರಿಗಳಾದ ನಿಮ್ಮ ಜವಾಬ್ದಾರಿ ಎಂದು ತರಾಟೆಗೆ ತೆಗೆದುಕೊಂಡರು. ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಸರಬರಾಜಾಗುವ ಆಹಾರ ಧಾನ್ಯ ಗಳನ್ನು ಸಂಗ್ರಹಿಸಿಡುವ ಸಂಬಂಧಿಸಿದ ಏಜೆನ್ಸಿಯ ಗೋದಾಮುಗಳಿಗೆ ಭೇಟಿ ನೀಡಿ ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭ ಉಳುವಂಗಡ ದತ್ತ, ಅಪ್ಪಚ್ಚಂಗಡ ಮೋಟಯ್ಯ, ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ರುಕ್ಮಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುನಂದ, ಕ್ಷೀರಭಾಗ್ಯ ಯೋಜನಾಧಿಕಾರಿ ಕೃಷ್ಣಪ್ಪ ಹಾಜರಿದ್ದರು.