ಮಡಿಕೇರಿ, ಆ. 2 ಕರಿಕೆಯ ಕಂದಾಯ ಇಲಾಖಾ ಸ್ವಾಧೀನದ ಜಾಗದಿಂದ ಭಾರೀ ಮೌಲ್ಯದ ಬೀಟಿ ಮರಗಳನ್ನು ಕಡಿದು ಕೇರಳಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ವಾಹನವೊಂದನ್ನು ವಶಪಡಿಸಿ ಕೊಳ್ಳಲಾಗಿದೆ.
ಕರಿಕೆಯಿಂದ ಕಡಿದು ಒಯ್ದಿದ್ದ ಮರಗಳನ್ನು ಕೇರಳ ತಳಿಪರಂಬುವಿನ ವಡವಳ್ಳಿ ಎಂಬಲ್ಲಿನ ತೋಟವೊಂದರಲ್ಲಿ ಇರಿಸಲಾಗಿತ್ತು. ಉಪವಲಯಾರಣ್ಯಾಧಿಕಾರಿ ಪಿ.ಟಿ. ಶಶಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಇಪ್ಪತ್ತಾರು ಬೃಹತ್ ಬೀಟಿ ಮರದ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕರಿಕೆಯ ರಬ್ಬರ್ ತೋಟದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಆರೋಪಿಗಳಾದ ಶ್ರೀಕುಮಾರ್ ಅಲಿಯಾಸ್ ಲವಮಂಗಳತ್ತು (42) ಹಾಗೂ ಜೈಕುಮಾರ್ ನಾಯರ್ (47) ಇವರುಗಳನ್ನು ಬಂಧಿಸಲಾಗಿದೆ. ಈ ಇಬ್ಬರು ಮೂಲತಃ ಕೇರಳದವರಾಗಿದ್ದಾರೆ. ಇವರಿಗೆ ಸೇರಿದ ಮಹೀಂದ್ರ್ರ ಟಿಯುವಿ - 300 ಜೀಪು (ಕೆಎ 05-ಎಎಂ 8074) ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮರಗಳನ್ನು ಕಡಿದು ಅಕ್ರಮ ಸಾಗಾಟಕ್ಕೆ ಬಳಸಿದ್ದ ಲಾರಿ ಇನ್ನೂ ಪತ್ತೆಯಾಗಿಲ್ಲ.
ಅಲ್ಲದೆ ಈ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಗಿರುವ ರಬ್ಬರ್ ತೋಟದ ವ್ಯವಸ್ಥಾಪಕ ಪೂತನ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಇನ್ನಿತರ ಆರೋಪಿಗಳಾದ ಬಿಜು ಮ್ಯಾಥ್ಯು ಅಲಿಯಾಸ್ ಅಬ್ರಾಹಂ ಹಾಗೂ ಅಕ್ರಮ ಸಾಗಾಣಿಕೆಗೆ ಬಳಸಿದ ಲಾರಿಯ ಚಾಲಕ ಅಬ್‍ಸ್ಕರ್ ಇವರಿಬ್ಬರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ. -ಸುಧೀರ್