ಮಡಿಕೇರಿ, ಸೆ. 21: ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಪಿ. ಸುಜಾ ಕುಶಾಲಪ್ಪ ಅವರು ವೀರಾಜಪೇಟೆ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭ ಸರಕಾರಿ ಜಮೀನು ಅಕ್ರಮವಾಗಿ ಮಂಜೂರಾಗಿರುವದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿದೆ.ಲೋಕಾಯುಕ್ತ ಮಡಿಕೇರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಪರಶುರಾಮ ಅವರು, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದ ಸುಜಾ ಕುಶಾಲಪ್ಪ, ಸದಸ್ಯರಾಗಿದ್ದ ಸುಧೀರ್, ಪುಟ್ಟಸ್ವಾಮಿ, ಮೈನಾ, ತಹಶೀಲ್ದಾರ್ ಹನುಮಂತರಾಯಪ್ಪ, ಕಂದಾಯ ಪರಿವೀಕ್ಷಕ ಸಿ.ಪಿ. ಅರ್ಜುನ, ಎ.ವಿ. ಶಿವಕುಮಾರ್, ಪಿ.ಜಿ. ಚೈತ್ರ, ನಿವೃತ್ತ ಗ್ರಾಮ ಲೆಕ್ಕಿಗ ಐ.ಸಿ. ವಾಸು ಇವರುಗಳ ವಿರುದ್ಧ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ವೀರಾಜಪೇಟೆ ತಾಲೂಕು ವ್ಯಾಪ್ತಿಯ ಹೆಗ್ಗಳ ಗ್ರಾಮದಲ್ಲಿ ಸರಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಮಂಜೂರಾತಿ ಮಾಡಿರುವದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೆಗ್ಗಳ ಗ್ರಾಮದ ಎಂ.ಸಿ. ಮಲ್ಲಿಗೆ, ಎಂ.ಸಿ. ತಾರ, ಬಿ.ಎಂ. ಚಿತ್ರಲೇಖ, ಎಂ.ಸಿ. ಪೂವಮ್ಮ, ಎಂ.ಸಿ. ಪೊನ್ನಪ್ಪ, ಕೆ.ಸಿ. ಸ್ವಪ್ನ, ಎಂ.ಎ. ಅಪ್ಪಚ್ಚು, ಕೆ.ಎಂ. ಮುತ್ತಪ್ಪ, ಎಂ. ರೇವತಿ ಅವರನ್ನು ಅನರ್ಹ ಫಲಾನುಭವಿಗಳೆಂದು ಗುರುತಿಸಲಾಗಿದ್ದು, ಅನರ್ಹ ಫಲಾನುಭವಿಗಳ ಬಳಿ 49 ಎಕರೆ ಸರಕಾರಿ ಜಮೀನು ಇದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.