ಪೊನ್ನಂಪೇಟೆ, ಡಿ. 30: ಅಕ್ರಮ ಸಕ್ರಮ ಸಮಿತಿ ಜಿಲ್ಲಾ ಅಧ್ಯಕ್ಷ ಶಾಸಕ ಕೆ.ಜಿ.ಬೋಪಯ್ಯ ಎರಡು ವರ್ಷಗಳಿಂದ ಸಮಿತಿಯ ಸಭೆ ಕರೆದಿಲ್ಲ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳೇ ಸಮಿತಿಯ ಸಭೆ ಕರೆದು ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಜಿಲ್ಲೆಯ ಅಕ್ರಮ ಸಕ್ರಮ ಅರ್ಜಿದಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು 250 ಫಲಾನುಭವಿಗಳು ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ ಯಾವದೇ ಕ್ರಮ ತೆಗೆದುಕೊಳ್ಳದ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಕೂಡಲೆ ಕ್ರಮ ಕೈಗೊಂಡು ಮಾಹಿತಿ ನೀಡಲು ಸೂಚಿಸಿರುವದಾಗಿ ಅರ್ಜಿದಾರರು ತಿಳಿಸಿದರು.ಇದಕ್ಕೂ ಮೊದಲು ನಿಯೋಗದಲ್ಲಿದ್ದ ಸಹಾಯಕ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರು ಸಚಿವರೊಂದಿಗೆ ಮಾತನಾಡಿ, ಅಕ್ರಮ-ಸಕ್ರಮ ಅರ್ಜಿದಾರರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹೈಕೋರ್ಟ್ ಈಗಾಗಲೆ ಸಮಿತಿಗೆ ನಿರ್ದೇಶನ ನೀಡಿದೆ. ಆದರೂ ಯಾವದೇ ಕ್ರಮ ಕೈಗೊಂಡಿಲ್ಲ. ಇದರಿಂದ ಜನತೆ ಕಳೆದ ಎರಡು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.

ನಿಯೋಗದಲ್ಲಿ ಚೊಟ್ಟೆಯಂಡಮಾಡ ದಿನೇಶ, ಬಾದುಮಂಡ ರಮೇಶ್, ಬಾದುಮಂಡ ದಿನೇಶ್, ಅಜ್ಜಮಾಡ ಲವ, ಚೊಟ್ಟಂಗಡ ಅಚ್ಚಪ್ಪ, ಚಂಗುಲಂಡ ಸೂರಜ್, ಬಯವಂಡ ಕಿಶೋರ್, ತೀತಿರ ಸವಿನ್, ಕಳ್ಳಿಚಂಡ ಮಣಿ, ಮಾಣಿರ ವಿಠಲ, ಮಾದಿರ ಅಜಿತ್, ಕಟ್ಟೆರ ನಂಜಪ್ಪ ಬಯವಂಡ ಜಗನ್, ಮಾಣಿರ ಮನು, ಅಜ್ಜಮಾಡ ಬೋಪಯ್ಯ ಹಾಜರಿದ್ದರು.