ಸೋಮವಾರಪೇಟೆ, ನ. 7: ಅಕ್ರಮ-ಸಕ್ರಮ ಸಮಿತಿಯಡಿ ವಿಚಾರಣೆಗೆ ಒಳಪಟ್ಟು ಮಂಜೂರಾಗಿದ್ದ 3.75 ಎಕರೆ ಜಾಗವನ್ನು ಮತ್ತೆ ಸರ್ಕಾರದ ವಶಕ್ಕೆ ಹಿಂಪಡೆಯಲು ಮಡಿಕೇರಿ ಉಪ ವಿಭಾಗದ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದರೂ, ತಾಲೂಕಿನ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಈ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುವದಾಗಿ ಬೆಳ್ಳಾರಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖರಾದ ಬಿ.ಎಸ್. ಜಗದೀಶ್, ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಳ್ಳಾರಳ್ಳಿ ಗ್ರಾಮದ ಸ.ನಂ. 38/1ರಲ್ಲಿ 0.25 ಎಕರೆ ಮತ್ತು 38/1ರಲ್ಲಿ 3.50 ಎಕರೆ ಸೇರಿದಂತೆ ಒಟ್ಟು 3.75 ಎಕರೆ ಜಾಗವನ್ನು ಅದೇ ಗ್ರಾಮದ ಬಿ.ಸಿ. ಶಿವರಾಜು ಮತ್ತು ಶಾರದ ಅವರುಗಳು ಒತ್ತುವರಿ ಮಾಡಿಕೊಂಡು, ಜಾಗದ ಅಕ್ರಮಕ್ಕಾಗಿ ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಕಳೆದ ತಾ. 10.04.2012ರಂದು ಅರ್ಜಿದಾರರಿಗೆ ಜಾಗ ಮಂಜೂರು ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಈ ಮಂಜೂರಾತಿಯಲ್ಲಿ ಕಂದಾಯ ಇಲಾಖಾ ನಿಯಮಾವಳಿ ಗಳನ್ನು ಪಾಲಿಸಿಲ್ಲ. ಸದರಿ ಅರ್ಜಿದಾರರಿಗೆ ಈಗಾಗಲೇ 6.70 ಎಕರೆ ಆಸ್ತಿ ಇದ್ದು, ಇದನ್ನು ದಾಖಲಾತಿಗಳಿಂದ ಹೊರಗಿಟ್ಟು 3.75 ಎಕರೆ ಜಾಗವನ್ನು ಹೊಸದಾಗಿ ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದೆವು.ಈ ದೂರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿದ್ದರು. ಸದರಿ ಶಿವರಾಜು ಮತ್ತು ಶಾರದ ಅವರುಗಳಿಗೆ ಬೆಳ್ಳಾರಳ್ಳಿ ಗ್ರಾಮದಲ್ಲಿ ಈಗಾಗಲೇ 6.70 ಎಕರೆ ಜಮೀನಿರುವ ಬಗ್ಗೆ ಕಂದಾಯ ಪರಿವೀಕ್ಷಕರು ವರದಿ ನೀಡಿದ ಮೇರೆ, ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 108ಜೆ(5)ರ ಪ್ರಕಾರ ನಿಯಮಗಳಿಗೆ ವಿರುದ್ಧವಾಗಿ ಮಾಡಿರುವ ಭೂ ಮಂಜೂರಾತಿಯನ್ನು ತಡೆಹಿಡಿಯಲು ಉಪ ವಿಭಾಗಾಧಿಕಾರಿಗಳು ಸೂಚಿಸಿದ್ದಾರೆ.

ಅದರಂತೆ ಬೆಳ್ಳಾರಳ್ಳಿ ಗ್ರಾಮದ ಸ.ನಂ.38/1ರ 0.25 ಮತ್ತು 38/1ರ 3.50 ಎಕರೆ ಸೇರಿದಂತೆ ಒಟ್ಟು 3.75 ಎಕರೆ ಜಾಗವನ್ನು ಕರ್ನಾಟಕ ಭೂಕಂದಾಯ ನಿಯಮಾವಳಿ 1966ರ ನಿಯಮ 108ಕೆ ಪ್ರಕಾರ ವಜಾಗೊಳಿಸಿ, ಸದರಿ ಜಮೀನನ್ನು ಎಲ್ಲಾ ಋಣಭಾರಗಳಿಂದ ಮುಕ್ತಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಉಪ ವಿಭಾಗಾಧಿಕಾರಿಗಳು, ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇದುವರೆಗೂ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿಲ್ಲ ಎಂದು ಜಗದೀಶ್ ಆರೋಪಿಸಿದರು.

ಉಳ್ಳವರೇ ಸರ್ಕಾರದ ಯೋಜ ನೆಯನ್ನು ದುರುಪಯೋಗಪಡಿಸಿ ಕೊಂಡಿದ್ದರೂ ಅಧಿಕಾರಿಗಳು ಅವರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಜಾಗ ಇಲ್ಲದ ಬಡವರೂ ಇದ್ದು, ಇವರುಗಳಿಗೆ ನಿವೇಶನ, ಜಾಗ ನೀಡುವಂತೆ ಈ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದರೂ, ಯಾವದೇ ಕ್ರಮ ಜರುಗಿಸಿಲ್ಲ. ಮುಂದಿನ 15 ದಿನಗಳ ಒಳಗೆ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯದಿದ್ದರೆ ಗ್ರಾಮಸ್ಥರ ಸಹಕಾರದಿಂದ ಉಗ್ರ ಹೋರಾಟ ನಡೆಸಲಾಗುವದು ಎಂದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಿ.ಯು. ವಾಣಿ, ಮಹೇಶ್, ಬಿ. ಆನಂದ್ ಉಪಸ್ಥಿತರಿದ್ದರು.