ನಾಪೋಕ್ಲು, ಜೂ. 20: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಬಲ್ಲಮಾವಟಿ, ಕೂರುಳಿ, ಕಾರುಗುಂದ, ಅಜ್ಜಿಮುಟ್ಟ, ಕಲ್ಲುಮೊಟ್ಟೆ, ಪಾಲೂರು ಕೊಟ್ಟಮುಡಿ, ಚೆರಿಯಪರಂಬು, ಬೇತು ಹಾಗೂ ಕೈಕಾಡು ಗ್ರಾಮಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಕೂಡಲೇ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾಹಿತಿ ಹಕ್ಕು ಮತ್ತು ಕಡ್ಡಾಯ ಶಿಕ್ಷಣ ಕಾರ್ಯಕರ್ತರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಎ. ಹ್ಯಾರೀಸ್ ಒತ್ತಾಯಿಸಿದ್ದಾರೆ. ಮರಳುಗಾರಿಕೆ ವಿರುದ್ಧ ಕ್ರಮಕೈಗೊಂಡು ನಿಯಂತ್ರಣಕ್ಕೆ ತರಬೇಕೆಂದು ನಾಪೋಕ್ಲು ಠಾಣಾಧಿಕಾರಿ ಹಾಗೂ ಕಂದಾಯ ಪರಿವೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಪಟ್ಟಣದಲ್ಲಿ ಖಾಸಗಿ ಬಸ್ಸುಗಳು ಬಹಳ ಹೊತ್ತು ನಿಲ್ಲುವದರಿಂದ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ನಿಲ್ದಾಣದಲ್ಲಿ ಖಾಸಗಿ ಬಸ್ಸುಗಳು ಕೇವಲ ಐದು ನಿಮಿಷ ನಿಲ್ಲಲು ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಮತ್ತೆ ಖಾಸಗಿ ಬಸ್ಸುಗಳ ನಿಲುಗಡೆಯಿಂದಾಗಿ ಟ್ರಾಫಿಕ್ ಸಮಸ್ಯೆ ಉದ್ಭವಿಸಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.