ಮಡಿಕೇರಿ, ಡಿ.17 : ಮಕ್ಕಂದೂರು ಗ್ರಾಮ ವ್ಯಾಪ್ತಿಯ ಕರ್ಣಂಗೇರಿ ಕೋಟೆಕಾಡು ಎಂಬಲ್ಲಿ ಮಹಿಳೆಯೊಬ್ಬರಿಗೆ ನಿಯಮ ಮೀರಿ ಅಕ್ರಮವಾಗಿ 12.84 ಎಕರೆಯಷ್ಟು ಜಾಗ ಮಂಜೂರಾಗಿದ್ದು, ಇದನ್ನು ತೆರವುಗೊಳಿಸಿ ಕಡು ಬಡವರು ಹಾಗೂ ದಲಿತ ಕುಟುಂಬಗಳಿಗೆ ಹಂಚಬೇಕೆಂದು ಕಾವೇರಿ ಸೇನೆಯಿಂದ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಸುಮಾರು 12.84 ಎಕರೆಯಷ್ಟು ಜಾಗವನ್ನು ಅಕ್ರಮವಾಗಿ ಹೊಂದಿರುವ ಮಹಿಳೆಯೊಂದಿಗೆ ಶಾಮೀಲಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ದಲಿತ ಹಾಗೂ ಬಡಕುಟುಂಬಗಳಿಗೆ ನೋಟೀಸ್ ನೀಡಿ ಸರ್ವೆ ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಿರುವ ದಾಗಿ ಕಾವೇರಿಸೇನೆ ಆರೋಪಿಸಿದೆ. ಸಾಗುವಳಿ ಚೀಟಿ ಹೊಂದಿರುವ ಬಡವರ ಜಾಗವನ್ನು ಸರ್ವೆ ಮಾಡುವದನ್ನು ಕಾವೇರಿಸೇನೆ ಖಂಡಿಸುತ್ತದೆ. ಕಾನೂನಿನ ಪ್ರಕಾರ ಒಬ್ಬ ಅರ್ಜಿದಾರ 4.85 ಎಕರೆ ಜಾಗವನ್ನಷ್ಟೇ ಹೊಂದಲು ಅರ್ಹನಾಗಿರುತ್ತಾನೆ. ಆದರೆ ಕೋಟೆಕಾಡಿನಲ್ಲಿ ಕಾನೂನನ್ನು ಉಲ್ಲಂಘಿಸಿ 12.84 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಮಹಿಳೆಗೆ ನಿಯಮದಂತೆ 4.85 ಎಕರೆ ಜಾಗವನ್ನು ಮಾತ್ರ ನೀಡಿ ಉಳಿದ ಜಾಗವನ್ನು ಸರಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಮತ್ತು ದಿಡ್ಡಳ್ಳಿಯಲ್ಲಿ ಬೀದಿ ಪಾಲಾದ ಕುಟುಂಬಗಳಿಗೆ ಈ ಜಾಗವನ್ನು ಹಂಚಬೇಕು ಅಥವಾ ನವಗ್ರಾಮ ಯೋಜನೆಯಡಿ ವಸತಿ ನಿರ್ಮಿಸಿ ಬಡವರಿಗೆ ನೀಡಬೇಕೆಂದು ಕಾವೇರಿಸೇನೆ ಒತ್ತಾಯಿಸಿದೆ. ಈ ಬಗ್ಗೆ ಆಗ್ರಹಿಸಿ ತಾ. 23ರಂದು ಕೋಟೆಕಾಡು ಕರ್ಣಂಗೇರಿಯಿಂದ ತಹಶೀಲ್ದಾರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟಿಸುವದಾಗಿ ಕಾವೇರಿಸೇನೆ ಎಚ್ಚರಿಸಿದೆ. ಈ ಸಂದರ್ಭ ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ ಕೋಟೆಕಾಡಿನ ನಿವಾಸಿಗಳಾದ ಲಲಿತ, ಕೆ.ಪಿ. ಕಮಲ, ಎನ್. ಕಮಲ, ಕೆ.ಪಿ. ಪ್ರಕಾಶ್ ಹಾಗೂ ಕಾವೇರಿ ಸೇನೆಯ ಸೋಮವಾರಪೇಟೆ ತಾಲೂಕಿನ ಅಧ್ಯಕ್ಷ ಹೊಸಬೀಡು ಶಶಿ ಉಪಸ್ಥಿತರಿದ್ದರು.