ವೀರಾಜಪೇಟೆ,ಸೆ. 23 : ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ಕೃಷ್ಣ ಸ್ಟೋರ್ ಪಕ್ಕದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಇಂದು ಧಾಳಿ ನಡೆಸಿದ ಪೊಲೀಸರು ಪಟ್ಟಣದ ಮೀನುಪೇಟೆಯ ನಿವಾಸಿ ಎಸ್. ಷಂಶುದ್ದಿನ್ ಹಾಗೂ ಮೊಗರಗಲ್ಲಿ ನಿವಾಸಿ ಸಯ್ಯದ್ ಎಂಬವರನ್ನು ಬಂಧಿಸಿದ್ದಾರೆ.

ಗಾಂಜಾ ಮಾರಾಟಕ್ಕೆ ಬಳಸಿದ ಆಟೋರಿಕ್ಷಾ ಹಾಗೂ ಅಕ್ರಮ ಗಾಂಜಾ ಮಾರಾಟ ಮಾಡಿದ ರೂ 3,300 ನಗದು ಹಾಗೂ ಆರೋಪಿಗಳ ಬಳಿಯಲ್ಲಿದ್ದ ಅಂದಾಜು ರೂ,8000 ಮೌಲ್ಯದ ಗಾಂಜಾವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಡಿ.ವೈ.ಎಸ್.ಪಿ. ನಾಗಪ್ಪ ಅವರ ಆದೇಶ ದಂತೆ ವೃತ್ತನಿರೀಕ್ಷಕ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಸಬ್ ಇನ್ಸ್‍ಪ್ಯೆಕ್ಟರ್ ಜಿ.ಕೆ.ಸುಬ್ರಮಣ್ಯ, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.