ಸುಂಟಿಕೊಪ್ಪ, ಅ.23: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಗ್ರಾಮದ ಕಾಫಿ ತೋಟದಲ್ಲಿ ಆಕ್ರಮ ಗಾಂಜಾ ಗಿಡಗಳನ್ನು ಬೆಳೆಸಲಾಗಿದ್ದು ಮಡಿಕೇರಿ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಸುಂಟಿಕೊಪ್ಪ ಪೊಲೀಸ ಧಾಳಿ ನಡೆಸಿ ಗಾಂಜಾ ಗಿಡ ಮತ್ತು ಆರೋಪಿಯೋರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಲ್ಲಿಗೆ ಸಮೀಪದ ಅಂದಗೋವೆ ಚಿಕ್ಕಂಡ ರಂಜನ್ ಎಂಬಾತ ತನ್ನ ಕಾಫಿ ತೋಟದಲ್ಲಿ ಕಾಫಿ ಗಿಡಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಮಾಹಿತಿ ಕಲೆಹಾಕಿದ ಸಿಬ್ಬಂದಿಗಳು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಸೋಮವಾರಪೇಟೆ ಡಿವೈಎಸ್‍ಪಿ ಮಾರ್ಗದರ್ಶನದಡಿಯಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಸಬ್‍ಇನ್ಸ್‍ಪೆಕ್ಟರ್ ಲಿಂಗಪ್ಪ ಹಾಗೂ ಸಿಬ್ಬಂದಿ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ಅಂದಗೋವೆ ಚಿಕ್ಕಂಡ ರಂಜನ್ ತೋಟಕ್ಕೆ ಧಾಳಿ ನಡೆಸಿ ಅಕ್ರಮವಾಗಿ ಬೆಳೆಸಲಾದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ರಂಜನ್ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.