ಕೂಡಿಗೆ, ಡಿ. 21: ತಮಿಳುನಾಡಿನಲ್ಲಿ ಉಂಟಾಗಿದ್ದ ವಾರ್ಧಾ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಸುರಿದÀ ಮಳೆಯಿಂದ ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಸಮಸ್ಯೆ ಅನುಭವಿಸಿದ್ದಾರೆ. ಈಗಾಗಲೆ ಅನೇಕ ಎಡರು ತೊಡರುಗಳಿಂದ, ಬರಗಾಲ ಹಾಗೂ ಹಾರಂಗಿ ಅಣೆಕಟ್ಟೆಯ ನೀರಿನ ಸಮಸ್ಯೆಯ ನಡುವೆ ಕಷ್ಟದಲ್ಲಿ ತಮ್ಮ ಜಮೀನುಗಳಿಗೆ ಭತ್ತದ ನಾಟಿ ಬೇಸಾಯ ಮಾಡಲಾಗಿತ್ತು. ರೈತರು ಬೆಳೆದ ಐ.ಆರ್ 64 ತನು ಸೇರಿದಂತೆ ಅನೇಕ ಹೈಬ್ರೀಡ್ ತಳಿಯ ಭತ್ತವು ಹೆಚ್ಚು ಕಾಳು ಕಟ್ಟದಿದ್ದರೂ ಸಾಧಾರಣ ಮಟ್ಟದಲ್ಲಿ ಬೆಳೆ ಬಂದಿದೆ. ಈ ಬೆಳೆಯು ಈಗಾಗಲೇ ಕೊಯ್ಲಿಗೆ ಬಂದಿದ್ದು, ಹಾರಂಗಿ ಅಚ್ಚುಕಟ್ಟು ಪ್ರದೇಶದ ಅನೇಕ ರೈತರು ಬೆಳೆಯನ್ನು ಕಟಾವು ಮಾಡಿದ್ದರು. ಅಕಾಲಿಕವಾಗಿ ಮಳೆ ಬಿದ್ದ ಪರಿಣಾಮ ಭತ್ತದ ಬೆಳೆಯನ್ನು ಗದ್ದೆಯಿಂದ ತೆಗೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಳೆಯ ನೀರು ಬಿದ್ದುದ್ದರಿಂದ ಭತ್ತವು ಗದ್ದೆಯಲ್ಲಿ ಉದುರುತ್ತಿದೆ. ಇದರಿಂದ ಈ ವ್ಯಾಪ್ತಿಯ ರೈತರಿಗೆ ಭಾರಿ ನಷ್ಟವಾಗುತ್ತಿದೆ. ಇಳುವರಿಯು ಕಡಿಮೆ ಬಂದರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಲ್ಲದೆ ಭತ್ತದ ಹುಲ್ಲು ಮಳೆಯ ನೀರಿನಿಂದ ಕರಗುವದರಿಂದ ಹಸುಗಳಿಗೂ ತಿನ್ನಲು ಹುಲ್ಲು ಸಿಗದಂತಾಗಿದೆ. ಇದರಿಂದ ವ್ಯಾಪ್ತಿಯ ರೈತರುಗಳಿಗೆ ಭಾರಿ ತೊಂದರೆಯುಂಟಾಗಿದೆ. ಸಂಬಂಧಪಟ್ಟ ಇಲಾಖೆಯ ವತಿಯಿಂದ ಪರಿಹಾರ ಒದಗಿಸ ಬೇಕೆಂದು ವ್ಯಾಪ್ತಿಯ ರೈತರ ಆಗ್ರಹವಾಗಿದೆ.