ಮಡಿಕೇರಿ, ಜ. 31: ಬರಗಾಲದಿಂದ ತತ್ತರಿಸುವಂತಾಗಿದ್ದ ಕೊಡಗು ಜಿಲ್ಲೆಯಲ್ಲಿ ಜನವರಿ 27 ಹಾಗೂ 28 ರಂದು ಸುರಿದ ಮಳೆ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಇಳೆಯನ್ನು ತಂಪಾಗಿಸಿದೆ.

ಕಾಫಿ ಕುಯಿಲಿನ ಸಂದರ್ಭದಲ್ಲಿ ಅಕಾಲಿಕವಾಗಿ ಮಳೆಯಾಗಿದ್ದು, ಸ್ವಲ್ಪ ಮಟ್ಟಿಗೆ ಸಮಸ್ಯೆ ಸೃಷ್ಟಿಸಿದರೂ ಭವಿಷ್ಯದ ಹಿತದೃಷ್ಟಿಯಲ್ಲಿ ಇಡೀ ಜಿಲ್ಲೆಯಾದ್ಯಂತ ಸುರಿದ ಮಳೆ ಕೊಡಗು ಜಿಲ್ಲೆಗೆ ವರವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು ಎಂಬದು ಹಲವು ಅನುಭವಸ್ಥ ಹಿರಿಯರ ಅಭಿಪ್ರಾಯವಾಗಿದೆ. ‘ರೈನ್ ಆಲ್‍ವೇಸ್ ಬ್ಲೆಸ್ಸಿಂಗ್... ಡ್ರಾಟ್ ಕಿಲ್ಲಿಂಗ್’ ಎಂಬ ಮಾತಿದೆ. ಕೊಡಗಿನ ಪರಿಸ್ಥಿತಿ ಕಳೆದ ಎರಡು ವರ್ಷದಿಂದ ಈ ರೀತಿಯಾದ ಪರಿಸ್ಥಿತಿ ಎದುರಿಸುವಂತಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಫಿ ಬೆಳೆಗಾರ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಅವರು ಈಗ ಸುರಿದ ಮಳೆಯನ್ನು ಬೆಳೆಗಾರರು, ಕೊಡಗಿನ ಜನರು ಇದು ದೇವರು ಕರುಣಿಸಿದ ವರ ಎಂದು ಪರಿಗಣಿಸಬೇಕೆಂದು ಹೇಳಿದ್ದಾರೆ.

ಕೊಡಗಿನ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಬೆಳೆಗೆ ಈ ಮಳೆ ಸುಮಾರು 15 ದಿನ ಮುಂಚಿತವಾಗಿ ಸುರಿದಿದೆ. ಆದರೂ ಇದು ಅಂತಹ ವ್ಯತಿರಿಕ್ತ ಪರಿಣಾಮ ಬೀರದು ಎಂಬದು ಬೋಸ್ ಮಂದಣ್ಣ ಸೇರಿದಂತೆ ಹಲವು ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳ ಅನಿಸಿಕೆಯಾಗಿದೆ. ಕಳೆದ ವರ್ಷ ಹಾಗೂ ಕೆಲವೆಡೆ ಆಚೆ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿತ್ತು. ಕೆಲವೆಡೆ 25 ಇಂಚಿಗೂ ಕಡಿಮೆ ಮಳೆಯಾಗಿದ್ದು, ಕಾಫಿ ಗಿಡಗಳು ಹಾಗೂ ಕರಿಮೆಣಸು ಬಳ್ಳಿಗಳು ಬಿಸಿಲಿನ ಬೇಗೆಯಿಂದ ಕರಕಲಾಗುತ್ತಿದ್ದ ಪರಿಸ್ಥಿತಿ ಕಂಡು ಬಂದಿತ್ತು.

ಇದರಿಂದ ಬೆಳೆಗಾರರು ಫಸಲು ಕಡಿಮೆಯ ದುಷ್ಪರಿಣಾಮ ಮಾತ್ರವಲ್ಲದೆ, ಗಿಡಗಳನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಈ ಬಾರಿ ಮಳೆ ತಡವಾಗಿದ್ದ ಪಕ್ಷದಲ್ಲಿ ತೋಟಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹಾಯಿಸುವ ಪರಿಸ್ಥಿತಿಯೂ ಇರಲಿಲ್ಲ. ನದಿ, ಕೆರೆಗಳು ಬತ್ತಿ ಹೋಗಿದ್ದು, ನೀರಿನ ಲಭ್ಯತೆಯೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆ ಇದ್ದು ಈಗ ಸುರಿದ ಮಳೆ ಜೀವಾಮೃತದಂತಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ಭಾಗಗಳಲ್ಲೂ ಮಳೆಯಾಗಿದೆ. ಸುಮಾರು ಒಂದು ಇಂಚಿನಿಂದ 5 ಇಂಚು ತನಕವೂ ಮಳೆಯಾಗಿರುವ ಕುರಿತು ವರದಿಯಾಗಿದೆ.

ಕಾಫಿಗೆ ಸಹಜವಾಗಿ ಫೆಬ್ರವರಿ 15ರ ನಂತರ ಮಳೆಯನ್ನು ನಿರೀಕ್ಷಿಸಲಾಗುತ್ತದೆ. ಈ ಮಳೆ 15 ದಿವಸದಷ್ಟು ಮುಂಚಿತವಾದರೂ ಹೆಚ್ಚಿನ ಸಮಸ್ಯೆಯಾಗದು. ಕಾಫಿ ಕುಯಿಲು ಹಾಗೂ ಒಣಗಿಸಲು ಸ್ವಲ್ಪ ತೊಂದರೆಯಾಗಿದೆ. ಹೂ ಬರುತ್ತಿರುವದರಿಂದ ನಾಲ್ಕೈದು ದಿನ

ಕುಯಿಲು ನಿಲ್ಲಿಸಬೇಕಾಗುತ್ತದೆ. ಕಾರ್ಮಿಕರಿಗೆ ಬದಲಿ ಕೆಲಸ ನೀಡಬೇಕಾದ ಅನಿವಾರ್ಯತೆ ಇದೆ.

(ಮೊದಲ ಪುಟದಿಂದ) ಆದರೆ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದರೆ, ಈ ಮಳೆ ವರದಾನವಾಗಿದೆ ಎಂಬದು ಹಲವರ ಅನಿಸಿಕೆ.

ರೋಬಸ್ಟಾ ಹಾಗೂ ಕರಿಮೆಣಸು ಗಿಡಕ್ಕೆ ಮಳೆಯಿಂದ ಹೆಚ್ಚು ಸಮಸ್ಯೆಯಾಗದು. ಫೆಬ್ರವರಿ, ಮಾರ್ಚ್‍ನಲ್ಲಿ ಮತ್ತೆ ಮಳೆ ಸಿಕ್ಕಿದರೆ, ಇನ್ನೂ ಉತ್ತಮವಾಗಲಿದೆ. ಆದರೆ, ಅರೆಬಿಕಾ ಬೆಳೆಗಾರರಿಗೆ ಸ್ವಲ್ಪ ಸಮಸ್ಯೆಯಾಗಲಿದೆ. ಅರೆಬಿಕಾ ಕಾಫಿಗೆ ಮಳೆ ಶೀಘ್ರವಾಗಿರುವದರಿಂದ ಮುಂದಿನ ಅಕ್ಟೋಬರ್, ನವೆಂಬರ್‍ನಲ್ಲೇ ಕಾಫಿ ಹಣ್ಣಾಗುವ ಸಾಧ್ಯತೆಯಿದ್ದು, ಈ ಸಂದರ್ಭ ಮಳೆಗಾಲ ಕಡಿಮೆಯಾಗದಿದ್ದರೆ, ಬೆಳೆಗಾರರು ಸಮಸ್ಯೆ ಎದುರಿಸಬೇಕಾಗುವ ಸಾಧ್ಯತೆ ಬರಬಹುದು.

1980ರ ದಶಕದಲ್ಲಿ ಸುಮಾರು 3 ಬಾರಿ ಬರಗಾಲ ಎದುರಾದ ಪರಿಣಾಮ ಕೊಡಗಿನ ಕಿತ್ತಳೆ ಸಂಪೂರ್ಣವಾಗಿ ನಾಶವಾಗಿತ್ತು ಎಂಬದನ್ನು ಬೋಸ್ ಮಂದಣ್ಣ ನೆನಪಿಸಿದರು. ಕಾಫಿ ಮಂಡಳಿಯ ವೀರಾಜಪೇಟೆ ವಿಭಾಗದ ಉಪ ನಿರ್ದೇಶಕ ಸತೀಶ್ ಚಂದ್ರ ಅವರ ಪ್ರಕಾರ ಈಗಿನ ಮಳೆಯಿಂದ ಶೇ. 60 ರಿಂದ 70ರಷ್ಟು ಹೂ ಬಿಡಲಿದೆ. 20 ದಿನಗಳ ಬಳಿಕ ‘ಬ್ಯಾಕಿಂಗ್’ ದೊರೆತರೆ ಮುಂದಿನ ವರ್ಷ ಉತ್ತಮ ಫಸಲು ನಿರೀಕ್ಷಿಸಬಹುದು.

ಅರೆಬಿಕಾ ಕಾಫಿ ಕುಯಿಲು ಆಗದಿದ್ದರೆ ಮಳೆಯಿಂದ ಸ್ವಲ್ಪ ಮಟ್ಟಿಗೆ ಧಕ್ಕೆ ಯಾಗಲಿದೆಯಾದರೂ ಅರೆಬಿಕಾ ಕುಯಿಲು ಬಹುತೇಕ ಮುಗಿದಿದೆ ಎಂದರು. ಕಾಫಿ ಮಂಡಳಿಯ ಅಧಿಕಾರಿಗಳು, ಬೆಳೆಗಾರರ ತೋಟಕ್ಕೆ ತೆರಳಿ ಅವರ ಅಭಿಪ್ರಾಯ ಹಾಗೂ ‘ಬ್ಲಾಸಮ್’ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿಯಿತ್ತರು.