ಕೂಡಿಗೆ, ನ. 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಯುವಕ ಸಂಘದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.g Áಜಾರಾವ್ ನೆರವೇರಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅತ್ಯಂತ ಕೆಳ ವರ್ಗದ ಬಡತನದ ಕುಟುಂಬದಲ್ಲಿ ಹುಟ್ಟಿ ಸಾಮಾಜಿಕವಾಗಿ ಅನೇಕ ರೀತಿಯ ಅಪಮಾನ, ನಿಂದನೆಗಳನ್ನು ಅರಗಿಸಿಕೊಂಡು ಶೋಷಿತ ಸಮಾಜಕ್ಕೆ ಏನಾದರು ಮಾಡಲೇಬೇಕೆಂಬ ಹಂಬಲದಿಂದ ಹೊರಹೊಮ್ಮಿದ ಮಹಾನ್ ಚೈತನ್ಯ ಶಾಲಿಯಾಗಿದ್ದಾರೆ.
ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ತುಳಿತಕ್ಕೆ ಒಳಗಾದ ಸಮಾಜದ ಅನೇಕ ಪ್ರತಿಭಾನ್ವಿತರಿಗೆ ಮೀಸಲಾತಿ ಕಲ್ಪಿಸಿ ಉತ್ತಮ ಮೌಲ್ಯಗಳು ಸಮಾಜದಲ್ಲಿ ಬೆಳೆಯಲು ಕಾರಣರಾದರು ಎಂದು ಅಭಿಪ್ರಾಯಪಟ್ಟರು.
ಐಎನ್‍ಟಿಯುಸಿ ಜಿಲ್ಲಾ ಅಧ್ಯಕ್ಷ ಟಿ.ಪಿ. ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಮೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಕೆ. ವಿಶ್ವನಾಥ್, ಸದಸ್ಯರಾದ ಮಂಜಯ್ಯ, ಕೃಷ್ಣ, ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಜಿಲ್ಲಾ ದಲಿತ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಬಿ.ಡಿ. ಅಣ್ಣಯ್ಯ, ದಲಿತ ಸಂರಕ್ಷಣಾ ಸಮಿತಿಯ ಸಂಚಾಲಕ ರಾಜು, ಯುವಕ ಸಂಘದ ಗೌರವಾಧ್ಯಕ್ಷ ಹರದಯ್ಯ, ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.