ಮಡಿಕೇರಿ, ಡಿ.4: ಕೊಡಗು ಹಾಗೂ ಜಿಲ್ಲೆಯ ಗಡಿ ಭಾಗಗಳಲ್ಲಿ ದೃಷ್ಟಿದೋಷಕ್ಕೆ ಒಳಗಾಗಿದ್ದ ಮೂರು ಸಹಸ್ರಕ್ಕೂ ಹೆಚ್ಚು ಮಂದಿಯ ನೇತ್ರ ಪರೀಕ್ಷಿಸಿ 462 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಿದ ಕೀರ್ತಿಗೆ ಅಶ್ವಿನಿ ಆಸ್ಪತ್ರೆ ಪಾತ್ರವಾಗಿದೆ. ಮೂವತ್ತನೇ ವರ್ಷದ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಿದ ಅಶ್ವಿನಿ ಆಸ್ಪತ್ರೆ ಅಂಧತ್ವದಿಂದ ಬಳಲುತ್ತಿದ್ದ ನೂರಾರು ಮಂದಿಗೆ ದೃಷ್ಟಿ ಒದಗಿಸಿ ಬೆಳಕಾಗಿ ನಿಂತಿದೆ. ಇಂದು ನಡೆದ ಶಿಬಿರ ಸಮಾರೋಪದಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಮೂವತ್ತು ವರುಷದ ಹಿಂದೆ ತಾವು ಅಶ್ವಿನಿಯ ನೇತ್ರ ಚಿಕಿತ್ಸಾ ಪ್ರಥಮ ಶಿಬಿರದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದು ದನ್ನು ಸ್ಮರಿಸಿದರು. ಅಶ್ವಿನಿ ಆಸ್ಪತ್ರೆಯ ಆಡಳಿತ, ವೈದ್ಯರು, ಸಿಬ್ಬಂದಿ ನಡೆಸುತ್ತಿರುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ ಅವರು ಕಣ್ಣಿನ ಆರೋಗ್ಯದ ಕುರಿತು ಗ್ರಾಮೀಣ ಭಾಗದಲ್ಲಿ ತಾತ್ಸಾರ ಮನೋಭಾ ವವಿದ್ದು, ಅಂತಹ ಮೌಢ್ಯ ನಿವಾರಣೆಯಾಗುವ ಅಗತ್ಯವಿದೆಎಂದರು.
ಟ್ರಸ್ಟಿನ ಕಾರ್ಯದರ್ಶಿ ಜಿ. ರಾಜೇಂದ್ರ ಅವರು ಮಾತನಾಡಿ ಹಣಕಾಸು ವಹಿವಾಟಿನ ಅಡಚಣೆಯ ನಡುವೆಯೂ ದಾನಿಗಳು ಶಿಬಿರಕ್ಕೆ ನೀಡಿದ ಸಹಕಾರವನ್ನು ಸ್ಮರಿಸಿದರು. ಅಶ್ವಿನಿ ಆಸ್ಪತ್ರೆ ಆಧುನೀಕರಣ ಗೊಳ್ಳುತ್ತಿದ್ದು, ಲೆಪ್ರೊಸ್ಕೊಪಿ, ಡಯಾಲಿಸಿಸ್, 24 ಗಂಟೆ ತುರ್ತು ಚಿಕಿತ್ಸಾ ಘಟಕ ಹಾಗೂ ಇತರ ಸೌಲಭ್ಯ ಗಳನ್ನು ಸಧ್ಯದಲ್ಲೇ ಆರಂಭಿÀಸಲಿದೆ ಎಂದರು. ವೃಂದಾವನ ಆಸ್ಪತ್ರೆ, ಅಪೊಲೋ ಆಸ್ಪತ್ರೆಗಳೂ ಅಶ್ವಿನಿಯ ಮೂಲಕ ಸೇವೆ ಆರಂಭಿಸಲಿದ್ದು, ತುರ್ತು ಚಿಕಿತ್ಸೆ ಹಾಗೂ ಹೃದಯ ಸಂಬಂಧಿ ಚಿಕಿತ್ಸೆಯೂ ಕೈ ಗೆಟುಕಲಿದೆ ಎಂದರು. ಜೊತೆಗೆ ಆ್ಯಂಬ್ಯುಲೆನ್ಸ್ ಸೇವೆಯೂ ಲಭ್ಯವಿರುವದಾಗಿ ಹೇಳಿದರು. ಆಸ್ಪತ್ರೆಗೆ ಲಿಫ್ಟಿನ ಅವಶ್ಯವಿದ್ದು, ದಾನಿಗಳು ಮುಂದೆ ಬರುವಂತೆ ಕೋರಿದರು.
ಟ್ರಸ್ಟಿ ಹಾಗೂ ಕುಶಾಲನಗರ ರೋಟರಿ ಅಧ್ಯಕ್ಷ ಎ.ಎ. ಚೆಂಗಪ್ಪ ಅವರು ಮಾತನಾಡಿ, ವಿಶ್ವದಲ್ಲಿ 45 ಮಿಲಿಯ ಅಂಧರಿರುವದಾಗಿ ಹೇಳಿದ ಅವರು, ಈ ಸಂಖ್ಯೆ ದ್ವಿಗುಣ ವಾಗಲಿದ್ದು, ಇಂತಹ ಶಿಬಿರದಿಂದ ದೃಷ್ಟಿ ಕುರಿತು ಅರಿವು ಹೆಚ್ಚಲಿದೆ ಎಂದರು. ಟ್ರಸ್ಟಿ ಗೋಖಲೆ ಅವರು ಮಾತನಾಡಿ, ಈ ಬಾರಿ ಒಟ್ಟು 3685 ಮಂದಿಯನ್ನು
(ಮೊದಲ ಪುಟದಿಂದ) ಪರಿಶೀಲಿಸಿ, 462 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿರುವದಾಗಿ ಹೇಳಿದರು. ವೈದ್ಯರಾದ ಡಾ. ಶಿವಪ್ರಸಾದ್, ಡಾ. ಪ್ರಶಾಂತ್ ಹಾಗೂ ಡಾ. ಸುಧಾಕರ್ ತಂಡ ಅವಿರತವಾಗಿ ದುಡಿಯುತ್ತಿರುವದಾಗಿ ಹೇಳಿದರು.
ಡಾ. ಸುಧಾಕರ್ ಮಾತನಾಡಿ ಕಣ್ಣಿನ ಆರೋಗ್ಯ ರಕ್ಷಣೆಗೆ ಮಧುಮೇಹ ಹಾಗೂ ರಕ್ತದ ಒತ್ತಡದ ಸಮತೋಲನದತ್ತ ಜನತೆ ಗಮನಹರಿಸಬೇಕೆಂದರು. ರೋಟರಿ ಮಡಿಕೇರಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಮಾತನಾಡಿ ಭಾರತದಲ್ಲಿ ಮೂರು ಮಿಲಿಯ ಮಂದಿ ಅಂಧತ್ವದಿಂದ ಬಳಲುತ್ತಿದ್ದಾರೆ ಎಂದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಜೀವನದಲ್ಲಿ ದೃಷ್ಟಿ ಅತಿಮುಖ್ಯವಾಗಿದ್ದು, ಅಶ್ವಿನಿ ಆಸ್ಪತ್ರೆ ಅತ್ಯುತ್ತಮವಾಗಿ ಸಂಘಟಿಸಿರುವ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸ್ ಅಧ್ಯಕ್ಷ ಜಯರಾಜ್ ಮಾತನಾಡಿ ಲಯನ್ಸ್ ಮೂಲಕ 30 ವರ್ಷದ ಹಿಂದೆ ಆರಂಭವಾದ ಕಣ್ಣಿನ ಶಿಬಿರದ ಕುರಿತು ವಿವರಿಸಿದರು.
ಶಿಬಿರಾರ್ಥಿಗಳ ಪರ ಗೌರಮ್ಮ ಹಾಗೂ ಮಹಮ್ಮದ್ ಎಂಬವರು ಮಾತನಾಡಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿದ ಆಸ್ಪತ್ರೆಯ ಸೇವೆಯನ್ನು ಕೊಂಡಾಡಿದರು. ನಾಪೋಕ್ಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಗಣೇಶ್ ಮಾತನಾಡಿ ಕಾಯಿಲೆಗಳನ್ನು ತಾಳ್ಮೆ ಮತ್ತು ಸಂಯಮದಿಂದ ಗುಣಪಡಿಸಿಕೊಳ್ಳಬೇಕೆಂದರು. ಅಂಧತ್ವ ನಿವಾರಣಾ ಸಂಸ್ಥೆಯ ವೈದ್ಯ ರವಿಕುಮಾರ್ ಮಾತನಾಡಿ 2020ರಲ್ಲಿ ವಿಶ್ವದಲ್ಲಿ ಕಣ್ಣಿನ ಪೊರೆಯಿಂದ ಅಂಧತ್ವ ಉಂಟಾಗುವದನ್ನು ತಡೆಗಟ್ಟಲಾಗುವದೆಂದರು. ಮಧುಮೇಹಿಗಳಿಗೆ ಲೇಜರ್ ಸರ್ಜರಿ ಸಾಧ್ಯವಿದ್ದು, ಮುಂದಿನ ಬಾರಿ ಅದನ್ನೂ ಪರಿಚಯಿಸಬಹುದೆಂದರು. ಅಧ್ಯಕ್ಷತೆಯನ್ನು ಟ್ರಸ್ಟಿ, ಲಯನ್ಸ್ ಸದಸ್ಯ ಬೆಳ್ಯಪ್ಪ ವಹಿಸಿದ್ದರು. ಟ್ರಸ್ಟಿ ಸಂಪತ್ ಸ್ವಾಗತಿಸಿ, ವಂದನಾರ್ಪಣೆ ಮತ್ತು ನಿರೂಪಣೆಯನ್ನು ಡಾ. ಕುಲಕರ್ಣಿ ಮಾಡಿದರು.