ಮಡಿಕೇರಿ, ಆ. 17: ಕಳೆದ ಹಲವು ದಿನಗಳಿಂದ ಬಿಡುವು ನೀಡಿದಂತಿದ್ದ ಮುಂಗಾರು ಮಳೆ ಇದೀಗ ಮತ್ತೆ ಬಿರುಸು ತೋರುತ್ತಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಕಳೆದ ಒಂದೆರಡು ದಿನದಿಂದ ಬಿರುಸಿನ ಮಳೆಯಾಗುತ್ತಿದೆ.ಆಶ್ಲೇಷ ಮಳೆ ನಕ್ಷತ್ರ ತಾ. 16ಕ್ಕೆ ಮುಗಿದಿದ್ದು, ಇದಿಗ ಮಖಾ ಮಳೆ ನಕ್ಷತ್ರ ಆರಂಭಗೊಂಡಿದೆ. ಕೊನೆಯ ಪಾದದಲ್ಲಿ ಆಶ್ಲೇಷಾ ಮಳೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಅಬ್ಬರ ತೋರಿದೆ. ಇದೀಗ ಆರಂಭಗೊಂಡಿರುವ ಮಖಾ ಮಳೆಯೂ ಇದೇ ಬಿಸುರು ತೋರುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲವೆಡೆಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಆದರೆ ಸುಮಾರು ಕಡೆಗಳಲ್ಲಿ ಮಳೆ ಕ್ಷೀಣವಾಗಿದ್ದು, ಆಗಾಗ್ಗೆ ಬಿಸಿಲು ಕಾಣುತ್ತಿರುವದು ವಿಶೇಷವಾಗಿದೆ.

ಕಳೆದ 24 ಗಂಟೆಗಳಲ್ಲಿ ಮಡಿಕೇರಿ ಹೋಬಳಿಗೆ 2.14 ಇಂಚು, ಸಂಪಾಜೆಗೆ 1 ಇಂಚು, ಭಾಗಮಂಡಲ 1.16 ಇಂಚು ಮಳೆಯಾಗಿದೆ. ಸೋಮವಾರಪೇಟೆ ಹೋಬಳಿಗೆ 1.04, ಶಾಂತಳ್ಳಿಗೆ 1.28 ಇಂಚು ಮಳೆಯಾಗಿದ್ದರೆ ಜಿಲ್ಲೆಯ ಇನ್ನಿತರ ಹೋಬಳಿಗಳಲ್ಲಿ ಮಳೆ ಕಡಿಮೆ ಕಂಡುಬಂದಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ 57.3 ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 70.38 ಇಂಚು ಸರಾಸರಿ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈತನಕ 84.23 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 106.97 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಈತನಕ 40.87 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 55.55 ಇಂಚು ಮಳೆಯಾಗಿತ್ತು.

ಸೋಮವಾರಪೇಟೆ ತಾಲೂಕಿಗೆ ಜನವರಿಯಿಂದ ಈತನಕ 46 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 48.64 ಇಂಚು ಮಳೆ ಬಿದ್ದಿತ್ತು.

ಮಡಿಕೇರಿಗೆ 83 ಇಂಚು ಮಳೆ

ಜಿಲ್ಲಾ ಕೇಂದ್ರ ಮಡಿಕೇರಿಗೆ ಜನವರಿಯಿಂದ ಈತನಕ ಒಟ್ಟು 83 ಇಂಚು ಮಳೆಯಾಗಿದೆ. ನಗರದ ಹೃದಯಭಾಗದಲ್ಲಿರುವ ಕೃಷಿ ಮತ್ತು ತೊಟಗಾರಿಕಾ ಸಂಶೋಧನಾ ಕೇಂದ್ರದ ದಾಖಲೆಯಂತೆ ಇಷ್ಟು ಮಳೆ ಈ ವರ್ಷದಲ್ಲಿ ನಗರದಲ್ಲಿ ದಾಖಲಾಗಿದೆ.