ಮಡಿಕೇರಿ, ಜ. 30: ಅಂತರಾಳದಿಂದ ಉದಯಿಸುವ ಸಾಹಿತ್ಯ ಹೃದಯಸ್ಪರ್ಶಿಯಾಗಿರುತ್ತದೆ. ಮನಮುÀಗಟ್ಟುವಂತಿರುತ್ತದೆ ಎಂದು ‘ಮನದಾಳದಿಂದ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಅಭಿಪ್ರಾಯಿಸಿದ್ದಾರೆ.ಹಿರಿಯ ಸಾಹಿತಿ, ಹಾಗೂ ಕಲಾ ತರಬೇತುದಾರರಾದ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಬರೆದಿರುವ ‘ಮನದಾಳದಿಂದ’ ಕವನ ಸಂಕಲನದ ಬಿಡುಗಡೆ ಸಮಾರಂಭ ಕೊಡಗು ಪ್ರೆಸ್‍ಕ್ಲಬ್ ಆಶ್ರಯದಲ್ಲಿ ಪತ್ರಿಕಾಭವನದಲ್ಲಿ ನೆರವೇರಿತು.ಸಮಾರಂಭವನ್ನು ಉದ್ಘಾಟಿಸಿದ ಶಕ್ತಿ ದಿನ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಮಾತನಾಡಿ, ಕವನಗಳು ಅಂತರಾಳದಿಂದ ಬಂದಾಗ ಹೃದಯವನ್ನು ಮುಟ್ಟುತ್ತದೆ. ಕವನಗಳು ಪ್ರಾಸ, ಭಾವನೆ, ಅರ್ಥಗಳಿರಬೇಕು. ಲೇಖಕರು ಪ್ರಕಟಿಸುವ ಪುಸ್ತಕಗಳನ್ನು ಕೊಂಡು ಓದಿದಾಗ ಮಾತ್ರ ಮನನವಾಗುತ್ತದೆ. ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು. ಶೋಭಾ ಅವರ ಸಂಕಲನದಲ್ಲಿ ಜೀವನದ ಅಂಶಗಳು ಜನÀ-ಮನಕ್ಕೆ ಮಾರ್ಗದರ್ಶನವಾಗಲಿ ಎಂದು ಆಶಿಸಿದರು.

ಕವನ ಸಂಕಲನ ಬಿಡುಗಡೆ ಮಾಡಿ ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯ ಕೃಷಿಗೆ ಬಂಜೆತನವಿತ್ತು ಎಂಬ ಕೂಗು ಕೇಳಿಬರುತ್ತಿತ್ತು. ಆದರೆ ಬಂಜೆತನವಿಲ್ಲ. ಸಾಕಷ್ಟು ಸಾಹಿತ್ಯ ಕೃಷಿ ಆಗಿದೆ. ಆದರೆ ಯಾರೂ ಪ್ರಚಾರ ಬಯಸುವವರಲ್ಲ ಎಂದು ಹೇಳಿದರು. ಸಾಹಿತಿಗಳು ತಮ್ಮ ಕೆಲಸ, ಸಮಯ ತ್ಯಾಗ ಮಾಡಿ ಸಾಹಿತ್ಯ ರಚನೆ ಮಾಡಿರುತ್ತಾರೆ. ಆದರೆ ನಮ್ಮಲ್ಲಿ ಪ್ರೋತ್ಸಾಹಿಸುವದಕ್ಕಿಂತ ತಪ್ಪುಗಳನ್ನು ಹುಡುಕುವ ಕೆಟ್ಟ ಚಾಳಿ ಇದೆ. ಇದು ಸರಿಯಲ್ಲವೆಂದರು. ಮುಂದಿನ ದಿನಗಳಲ್ಲಿ ಪರಿಷತ್ ವತಿಯಿಂದ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶ ಹೊಂದಲಾಗಿದೆ. ಮಳೆಗಾಲದ ಬಳಿಕ ಜಿಲ್ಲೆಯಲ್ಲಿ ಪುಸ್ತಕ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗುವದೆಂದು, ಕೃತಿಗಳ ಬಗ್ಗೆ ವಿಮರ್ಶೆಯಾಗಬೇಕೆಂದು ಹೇಳಿದರು.

ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೃಷ್ಣ ಮಾತನಾಡಿ, ಶೋಭಾ ಸುಬ್ಬಯ್ಯ ಅವರದ್ದು ಕಲಾವಿದರ ಕುಟುಂಬ. ಶೋಭಾ ಅವರು ಎಲ್ಲ ಕಲೆಗಳನ್ನು ಕರಗತ ಮಾಡಿಕೊಂಡಿ ದ್ದಾರೆ. ಅವರಿಂದ ಮತ್ತಷ್ಟು ಕೃತಿಗಳ ರಚನೆಯೊಂದಿಗೆ, ಸಮಾಜಕ್ಕೆ ಸಾಕಷ್ಟು ಕೊಡುಗೆ ಲಭಿಸುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೆಸ್‍ಕ್ಲಬ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕಾವ್ಯ - ಕವನ ಮನದಾಳದಿಂದ ಬರಬೇಕು. ಜನರೊಂದಿಗೆ ಬೆರೆಯಬೇಕೆಂದು ಹೇಳಿದರು. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಕವಿಗಳು ಜೀವನದ ಪ್ರತಿನಿತ್ಯದ ವಿಚಾರಗಳನ್ನು ಮನನಮಾಡಿಕೊಂಡು ಸಾಹಿತ್ಯ ರಚನೆ ಮಾಡುತ್ತಾರೆ. ಕವಿತೆಗಳಲ್ಲಿ ಹಲವಾರು ಪ್ರಾಕಾರಗಳಿವೆ. ನವರಸಗಳು, ಪ್ರೇಮ ಕಾವ್ಯ - ಕವನ ರಚನೆಯಾಗುತ್ತದೆ ಎಂದರು. ದಾಸ ಸಾಹಿತ್ಯ, ವಚನ ಸಾಹಿತ್ಯಗಳ ಕೊಡುಗೆಯೂ ಅಪಾರ ಎಂದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಿಂದಲೇ ಕವಿತೆ, ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳಿದರು.

ಕವಯತ್ರಿ ಶೋಭಾ ಸುಬ್ಬಯ್ಯ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. ಶಕ್ತಿ ಸಂಪಾದಕ ಬಿ.ಜಿ. ಅನಂತಶಯನ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಗಾಯಕಿಯರಾದ ಕೃಷ್ಣವೇಣಿ ಪ್ರಸಾದ್ ಹಾಗೂ ಶೋಭಾ ಭಟ್ ಅವರುಗಳು ಶೋಭಾ ಸುಬ್ಬಯ್ಯ ವಿರಚಿತ ಕವನಕ್ಕೆ ರಾಗ ಸಂಯೋಜಿಸಿ ಹಾಡಿ ಗಮನ ಸೆಳೆದರು.

ಮಾದೇಟಿರ ಪ್ರಮೀಳಾ ಅವರು ಶೋಭಾ ಅವರು ರಚಿಸಿದ ಕಾವೇರಿ ಕುರಿತಾದ ಭಕ್ತಿಗೀತೆಯೊಂದಿಗೆ ಪ್ರಾರ್ಥನೆ ಮಾಡಿದರು. ಪ್ರೆಸ್‍ಕ್ಲಬ್ ನಿರ್ದೇಶಕ ಅನಿಲ್ ಎಚ್.ಟಿ. ಸ್ವಾಗತಿಸಿದರೆ, ನಿರ್ದೇಶಕ ಬಿ.ಎಂ. ಮನುಶೆಣೈ ವಂದಿಸಿದರು.