ವೀರಾಜಪೇಟೆ, ಆ. 17: ಸರ್ಕಾರದ ಆದೇಶದಂತೆ ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ಎಲ್ಲ ಅಂಗಡಿ ಮಳಿಗೆಗಳನ್ನು ಮರು ಟೆಂಡರ್ ಮಾಡುವಂತೆ ಪಟ್ಟಣ ಪಂಚಾಯಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣ ಪಂಚಾಯಿತಿಯ ಸಭೆಯು ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಖಾಸಗಿ ಬಸ್ಸು ನಿಲ್ದಾಣದಲ್ಲಿ 69 ಮಳಿಗೆಗಳಿವೆ ಸರ್ಕಾರದ ನಿಯಮದಂತೆ ಪ್ರತಿ ವರ್ಷ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಹಲವು ವರ್ಷಗಳಿಂದ ಅಂಗಡಿ ಮಳಿಗೆಗಳು ಬಾಡಿಗೆ ಒಪ್ಪಂದದ ಟೆಂಡರ್ ಇಲ್ಲದೆ ನವೀಕರಣ ಮಾಡಲಾಗುತ್ತಿದೆ. ಸರಕಾರದ ಆದೇಶದಂತೆ ಇದನ್ನು ಮರು ಟೆಂಡರ್ ಮಾಡಲಾಗುವದು ಎಂದು ಮುಖ್ಯಾಧಿಖಾರಿ ಕೃಷ್ಣಪ್ರಸಾದ್ ಸಭೆಗೆ ತಿಳಿಸಿದಾಗ ಬಿಜೆಪಿ ಸದಸ್ಯ ಇ.ಸಿ ಜೀವನ್ ಹಾಗೂ ಜೆಡಿಎಸ್ ಸದಸ್ಯ ಮತೀನ್ ಆಕ್ಷೇಪ ವ್ಯಕ್ತ ಪಡಿಸಿದರು. ಸಭೆ ಕೆಲಕಾಲ ಗದ್ದಲಕ್ಕೆ ತಿರುಗಿತು. ಜಿಡಿಎಸ್ ಸದಸ್ಯರಾದ ಎಸ್.ಎಚ್. ಮೊೈನುದ್ದಿನ್, ವಿಶ್ವನಾಥ್ ಸಹಮತ ವ್ಯಕ್ತ ಪಡಿಸಿದಾಗ ಉಳಿದ ಸದಸ್ಯರು ಧ್ವನಿಗೂಡಿಸಿದರು.
ಬಿಜೆಪಿ ಸದಸ್ಯ ರಚನ್ ಮೇದಪ್ಪ ಮಾತನಾಡಿ ನಾಡ ಹಬ್ಬ ಗೌರಿ ಗಣೇಶ ಸಮೀಪಿಸುತ್ತಿದೆ. ಶೋಭಾಯಾತ್ರೆಗೆ ತೆರಳುವ ಪಿಡಬ್ಲುಡಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಕಳೆದ ಬಾರಿ ಪಟ್ಟಣ ಪಂಚಾಯಿತಿಯಿಂದ ರÀಸ್ತೆಗಳನ್ನು ಸರಿ ಪಡಿಸಲಾಗಿದೆ. ನಾವು ಸರಿಪಡಿಸಿದ ರಸ್ತೆಗಳಿಗೆ ಪಿಡಬ್ಲುಡಿ ಇಲಾಖೆ ಹಣ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಾರಿ ಅವರಿಂದಲೇ ರಸ್ತೆ ಸರಿಪಡಿಸಿ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಸಚಿನ್ ಕುಟ್ಟಯ್ಯ ಇಂದಿನ ಸಭೆಗೆ ಪಿಡಬ್ಲುಡಿ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ಅವರು ಗೈರು ಹಾಜರಾಗಿದ್ದಾರೆ. ಪತ್ರದ ಮೂಲಕ ವ್ಯವಹರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ರಸ್ತೆಯ ಮಧ್ಯದಲ್ಲಿ ಅನಗತ್ಯ ಟೆಲಿಫೋನ್, ವಿದ್ಯುತ್ ಕಂಬಗಳಿವೆ, ಅವುಗಳನ್ನು ಕೂಡಲೇ ತೆರವು ಗೊಳಿಸುವಂತೆ ರಚನ್ ಮೇದಪ್ಪ ಸಭೆಗೆ ತಿಳಿಸಿದಾಗ ಈಗಾಗಲೇ ಸಂ¨ಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಚಿನ್ ಕುಟ್ಟಯ್ಯ ತಿಳಿಸಿದಾಗ ಮಧ್ಯ ಪ್ರವೇಶಿಸಿದ ಜೆಡಿಎಸ್ ಸದಸ್ಯ ವಿಶ್ವನಾಥ್ ಉಡಾಫೆಯಿಂದ ವರ್ತಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳ ನೀರಿನ ಸಂಪರ್ಕವನ್ನು ಕಡಿತಗೊಳಿಸಿದರೆ ಅವರು ಸರಿ ದಾರಿಗೆ ಬರುತ್ತಾರೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಕಚೇರಿ ಎದುರು ಇದ್ದ ಶೌಚಾಲಯವನ್ನು ನೆಲಸಮ ಮಾಡಲಾಗಿದೆ. ಅಲ್ಲಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ಇಲ್ಲ, ನೈಸರ್ಗಿಕ ಕ್ರಿಯೆ ನಡೆಸಲು ಎಲ್ಲಿ ಹೋಗಬೇಕು ಎಂದು ನಾಮಕರಣ ಸದಸ್ಯ ರಂಜಿ ಪೂಣಚ್ಚ ಹಾಗೂ ಡಿ.ಪಿ ರಾಜೇಶ್ ಸಭೆಗೆ ತಿಳಿಸಿದಾಗ ವಿಸೃತ ಚರ್ಚೆ ನಡೆದು ಮುಂದಿನ ಅನುಧಾನದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಹಿರಿಯ ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಲು ಆಯ್ದ ಸ್ಥಳಗಳಲ್ಲಿ ಶೌಚಾಲಯವನ್ನು ಕೇಂದ್ರ ಸರಕಾರದ ಸ್ವಚ್ಚ ಭಾರತ್ ಮಿಷನರಿ ಯೋಜನೆಯಲ್ಲಿ ನಿರ್ಮಾಣ ಮಾಡುವಂತೆ ಸಭೆಗೆ ಆಗ್ರಹಿಸಿದರು. ಇದರಿಂದ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಲು ಅನುಕೂಲವಾಗಲಿದೆ ಎಂದರು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಕೂಡಲೆ ರಸ್ತೆ ಬದಿ ವ್ಯಾಪಾರವನ್ನು ನಿರ್ಬಂಧಿಸುವಂತೆ ರಚನ್ ಮೇದಪ್ಪ ತಿಳಿಸಿದಾಗ ಅಧ್ಯಕ್ಷರುÀ ಕೂಡಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮಾತನಾಡಿ ಹಳೆಯದಾದ ಪೌರ ಕಾರ್ಮಿಕರ ವಸತಿ ಗೃಹಗಳನ್ನು ದುರಸ್ತಿ ಪಡಿಸಿ ಸುಣ್ಣ ಬಣ್ಣ ಬಳಿಯುವಂತೆ ಸಭೆಗೆ ತಿಳಿಸಿದಾಗ ಇದಕ್ಕೆ ತಕ್ಷಣ ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ಕ್ರಮ ಕೈಗೊಳ್ಳುವದಾಗಿ ಸಚಿನ್ ಕುಟ್ಟಯ್ಯ ಭರವಸೆ ನೀಡಿದರು.
ವಾಣಿಜ್ಯವಾಗಿ ನೀರು ಬಳಕೆ ದಾರರಿಗೆ ಮೀಟರ್ ಅಳವಡಿಸುವ ಕುರಿತು ನಾಮಕರಣ ಸದಸ್ಯರು ಹಾಗೂ ಚುನಾಯಿತ ಕೆಲವು ಸದಸ್ಯರುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷ ಸಚಿನ್ ಕುಟ್ಟಯ್ಯ ಮೀಟರ್ ಅಳವಡಿಕೆಯ ಕುರಿತಂತೆ ಹಿಂದಿನ ಸಭೆಗಳಲ್ಲಿ ಚರ್ಚೆಯಾಗಿ ತೀರ್ಮಾನಕ್ಕೆ ಬರಲಾಗಿದೆ. ಅದೇ ನಿರ್ಧಾರ ಮುಂದುವರೆಸಲಾಗುವದು ಎಂದು ಸಭೆಗೆ ತಿಳಿಸಿದರು.
ಸದಸ್ಯ ಇ.ಸಿ.ಜೀವನ್, ನಾಮಕರಣ ಸದಸ್ಯರುಗಳಿಗೆ, ಚುನಾಯಿತ ಸದಸ್ಯರುಗಳಿಗಿರುವಷ್ಟು ಮುಕ್ತ ಅಧಿಕಾರವಿಲ್ಲ. ಸಭೆಗೆ ಸಲಹೆ ಮಾತ್ರ ಕೊಡಬಹುದು, ಸಭೆಯ ನಿರ್ಧಾರವನ್ನು ಚುನಾಯಿತ ಸದಸ್ಯರುಗಳು ತೆಗೆದುಕೊಳ್ಳುವರು ಎಂದಾಗ ಸಭೆ ಕೆಲವು ನಿಮಿಷ ಗಳವರೆಗೆ ಗೊಂದಲಮಯದಿಂದ ಕೂಡಿತ್ತು. ಪೌರ ಕಾರ್ಮಿಕರಿಗೆ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪಂಚಾಯಿತಿ ವತಿಯಿಂದ ಚಿಕಿತ್ಸೆ ನೀಡುವದು. ಸಾರ್ವಜನಿಕ ಆಸ್ಪತ್ರೆಯ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡುವಂತೆ ಸಭೆಯಲ್ಲಿ ತೀರ್ಮಾನಿಸ ಲಾಯಿತು. ಪಟ್ಟಣದ ಜನತೆಯ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹೊಟೇಲ್‍ಗಳು, ಮಿನಿ ಕ್ಯಾಂಟೀನ್‍ಗಳು, ಬೇಕರಿಗಳಲ್ಲಿ ಪಂಚಾಯಿತಿಯ ಆರೋಗ್ಯ ವಿಭಾಗದಿಂದ ಸಿಬ್ಬಂದಿಗಳು, ಸದಸ್ಯರುಗಳೆಲ್ಲ ಸೇರಿ ಧಾಳಿ ನಡೆಸಿ ದಂಡ ವಿಧಿಸುವಂತೆ ಸಭೆ ತೀರ್ಮಾನಿಸಿತು. ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಕಾವiಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನಿತಾ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಸಿಬ್ಬಂದಿಗಳು ಹಾಜರಿದ್ದರು.