ಶನಿವಾರಸಂತೆ, ಡಿ. 2: ಭೂಮಿ-ವ್ಯವಸಾಯವನ್ನು ನಂಬಿ ಶ್ರಮಪಟ್ಟು ದುಡಿಯುವ ರೈತನ ಬದುಕು ಸದಾ ಹಸನಾಗಿರುತ್ತದೆ ಎಂದು ಪ್ರಗತಿಪರ ರೈತ ಕೆ.ಪಿ. ಶಿವಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ, ದುಂಡಳ್ಳಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಕೊಡ್ಲಿಪೇಟೆ ವಲಯ ಮತ್ತು ಹೋಬಳಿ ಕೃಷಿ ಯಂತ್ರಧಾರೆ ಆಶ್ರಯದಲ್ಲಿ ನಡೆದ ‘ಕೃಷಿಯಲ್ಲಿ ಯಂತ್ರದ ಬಳಕೆ’ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತ್ ಕುಮಾರ್ ಮಾತನಾಡಿ, ಪ್ರಕೃತಿ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಹೆಚ್ಚು ಗಿಡಗಳನ್ನು ಬೆಳೆಸಿದರೆ ಪ್ರಕೃತಿ ಸಮೃದ್ಧಿಯಾಗಿ ಉತ್ತಮ ಮಳೆಯನ್ನು ನಿರೀಕ್ಷಿಸಬಹುದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಸಾವಯವ ಕೃಷಿ ಪದ್ಧತಿ ಮತ್ತು ಮಿಶ್ರ ಬೆಳೆ ಬೇಸಾಯ ಕ್ರಮದಿಂದ ರೈತರ ಬದುಕು ಹಸನಾಗುತ್ತದೆ. ರೈತನು ಒಂದೇ ಬೆಳೆಗೆ ಜೋತು ಬೀಳದೆ ಸಾವಯವ ಕೃಷಿಯೊಂದಿಗೆ ಯಂತ್ರೋಪಕರಣ ಗಳ ಬಳಕೆಯಿಂದ ಮಿಶ್ರ ಬೆಳೆ ವ್ಯವಸಾಯ ಪದ್ಧತಿ ಅನುಸರಿಸಬಹುದು ಎಂದು ಸಲಹೆ ನೀಡಿದರು.

ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿದರು. ಪಂಚಾಯಿತಿ ಸದಸ್ಯ ಎಸ್.ಎ. ಆದಿತ್ಯ, ಸೇವಾ ಪ್ರತಿನಿಧಿಗಳಾದ ಯಶೋದಾ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.