ವೀರಾಜಪೇಟೆ, ಡಿ. 6: ಭಾರತದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಿಂದುಳಿದ ವರ್ಗದ ನಾಯಕ, ಸಂವಿಧಾನ ರಚನೆ ಮುಖ್ಯಸ್ಥರಾಗಿರುವದರಿಂದ ಅವರು ಭಾರತದ ಮೊದಲ ಕಾನೂನು ಮಂತ್ರಿ, ಭಾರತದ ಮಹಾತ್ಮರ ಸಾಲಿಗೆ ಸೇರಿದ ಮಹಾನ್ ವ್ಯಕ್ತಿಯಾಗಿದ್ದು, ಅವರು ಜಾತಿ ವ್ಯವಸ್ಥೆಯನ್ನು ಶುದ್ಧೀಕರಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟ ಹರಿಕಾರ ಎಂದು ಜನತಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 60ನೇ ಮಹಾಪರಿನಿಬ್ದಾಣ ದಿನದ ಅಂಗವಾಗಿ ವಿಚಾರ ಸಂಕೀರಣದಲ್ಲಿ ಅಂಬೇಡ್ಕರ್ ಭಾವ ಚಿತ್ರವನ್ನು ಅನಾವರಣಗೊಳಿಸಿ ಪುಷ್ಪ ಮಾಲೆ ಅರ್ಪಿಸಿ ಮಾತ ನಾಡಿದರು. ಜೀವಿತಾವಧಿಯಲಿಯೇ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಬೇಕಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಭಾರತ ಮಾತೆಯ ಎಲ್ಲ ಮಕ್ಕಳನ್ನು ಕೀಳಾಗಿ ಎರಡನೇ ದರ್ಜೆಯ ನಾಗರಿಕರಾಗಿ ಕಾಣುತ್ತಿದ್ದರು. ಸ್ವಾತಂತ್ರ್ಯ ನಂತರ ಒಂದು ವರ್ಗವನ್ನು ಕೆಳಮಟ್ಟದವ ರೆಂದು ತಿರಸ್ಕಾರ ಮನೋಭಾವದಿಂದ ನೋಡಿರತಕ್ಕಂತದ್ದು ನೋವಿನ ವಿಚಾರ. ಸಮಾನತೆಗಾಗಿ ಅರ್ಥ ಪೂರ್ಣ ಹೋರಾಟ ಕೈಗೊಂಡಿರುವ ಸಮಂಜಸವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್ ಮಾತನಾಡಿ ಇಂದಿನ ಸಮಾಜದಲ್ಲಿ ಜಾತಿ ಮತ್ತು ಧರ್ಮಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ ಸಮಾಜದ ದುರಂತವಾಗಿದೆ. ಜಾತ್ಯತೀತವಾಗಿ ಸಮಾನತೆಯನ್ನು ಕಾಪಾಡಿಕೊಳ್ಳುವದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಭದ್ರ ಬುನಾದಿಯಾಗಲಿದೆ ಎಂದು ಹೇಳಿದರು.
ಹುಣಸೂರಿನ ವಕೀಲ ಜಗದೀಶ್ ಅವರು ‘ವೈದಿಕ ಪರಂಪರೆಯಲ್ಲಿ ಅಸಮಾನತೆಯ ಮೂಲ ನೆಲೆಗಳು’ ಕುರಿತು ಮಾಹಿತಿ ನೀಡಿದರು.
ಸಭೆಯನ್ನುದ್ದೇಶಿಸಿ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಕೆ.ವಿ. ಸುನಿಲ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎಚ್.ಎಸ್. ಕೃಷ್ಣಪ್ಪ ಮಾತನಾಡಿ ಸಮಾಜದಲ್ಲಿ ಸಮಾನತೆಗಾಗಿ ಹಿಂದುಳಿದ ವರ್ಗಗಳ ಹೋರಾಟ ನಿರಂತರವಾಗಿ ನಡೆಯಲಿದೆ. ಹಿಂದುಳಿದವರಲ್ಲಿ ಒಮ್ಮತವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಸಮಿತಿಯ ಸಂಚಾಲಕ ಎಚ್.ಆರ್. ಪರಶುರಾಮ್ ಜ್ಯೋತಿ ಬೆಳಗಿಸಿದರು. ವಿಚಾರ ಸಂಕಿರಣದಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಎಸ್. ಓಮನ, ವಿದ್ಯಾರ್ಥಿ ಒಕ್ಕೂಟದ ಎಚ್.ಬಿ. ಸತೀಶ್, ತಾಲೂಕು ಸಮಿತಿಯ ಪದಾಧಿಕಾರಿಗಳು, ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.