ಸೋಮವಾರಪೇಟೆ, ಆ. 10: ವಿದ್ಯಾರ್ಥಿಗಳು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ಕಾಲೇಜಿನ ಗ್ರಂಥಾಲಯದಲ್ಲಿರುವ ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಗ್ರಂಥಾಲಯಗಳು ವಿದ್ಯಾರ್ಥಿಗಳಿಗೆ ಉತ್ತಮ ಸ್ನೇಹಿತರಿದ್ದಂತೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ಎನ್.ಶಿವಕುಮಾರ್ ಹೇಳಿದರು.

ಇಲ್ಲಿನ ಬಿ.ಟಿ. ಚನ್ನಯ್ಯ ಗೌರಮ್ಮ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಅಭಿವಿನ್ಯಾಸ ಹಾಗೂ ಪ್ರಾಂಶುಪಾಲರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿದ್ದಾಗ ಜವಾಬ್ದಾರಿ ಹೆಚ್ಚಿರುತ್ತದೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ತೃಪ್ತಿಯೊಂದಿಗೆ, ಕಾಲೇಜಿನ ಅಭಿವೃದ್ಧಿಗೆ ತನ್ನ ಪ್ರಾಮಾಣಿಕವಾದ ಸೇವೆಯನ್ನು ಸಲ್ಲಿಸಿದ ಆತ್ಮತೃಪ್ತಿ ಇದೆ ಎಂದು ಹೇಳಿದರು. ಕಾಲೇಜಿನ ಅಭಿವೃದ್ಧಿಗೆ ಉಪನ್ಯಾಸಕರು, ಆಡಳಿತ ಮಂಡಳಿ ಯವರು ಹಾಗೂ ಪೋಷಕರು ಹೆಚ್ಚಿನ ಸಹಕಾರ ನೀಡಿದ್ದಾರೆ. ಎಲ್ಲರೂ ಸಮನ್ವಯತೆಯಿಂದ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಯಾವದೇ ಸಂಸ್ಥೆಯ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ಇ.ಐಪು ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀಧರ್, ಕರಿಯಪ್ಪ ರೈ, ಉಪನ್ಯಾಸಕ ಹೆಚ್.ಎನ್. ರಮೇಶ್, ಮನೋಜ್ ನಿವೃತ್ತ ಪ್ರಾಂಶುಪಾಲರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.