ಮಡಿಕೇರಿ, ಸೆ. 9: ಮಡಿಕೇರಿ ನಗರ ಸಭೆಯ ಇತಿಹಾಸದಲ್ಲಿ ಹೊಸದೊಂದು ಬೆಳವಣಿಗೆ ರಾಜ್ಯದ ಗಮನ ಸೆಳೆದಂತಾಗಿ ಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳಲು ಪರದಾಡುವಂತಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲು ತನ್ನದೇ ಆದ ಕಸರತ್ತು ನಡೆಸಿದ ಬಿಜೆಪಿಯ ರಾಜಕೀಯ ಹೋರಾಟ ತೀರಾ ಜಿದ್ದಾಜಿದ್ದಿನ ಕ್ರೀಡಾ ಸ್ಪರ್ಧೆಯಂತೆ ನಡೆದು ತೀವ್ರ ಕುತೂಹಲ ಕೆರಳಿಸಿತ್ತು.

ಲಾಟರಿಯ ಮೂಲಕ ಫಲಿತಾಂಶ ಬರಬೇಕಾದ ಎರಡನೆಯ ಅವಧಿಯ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಕೈ ಮುರಿಯಲಿಲ್ಲ. ಕಮಲ ಅರಳಲಿಲ್ಲ. ‘ಲಾಟರಿ ಭಾಗ್ಯ’ದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‍ನ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿಯ ಟಿ.ಎಸ್. ಪ್ರಕಾಶ್ ಅವರಿಗೆ ಅದೃಷ್ಟ ಒಲಿಯಿತು. ಇವರಿಗೆ ಸ್ಪರ್ಧಿಗಳಾಗಿದ್ದ ಬಿಜೆಪಿಯ ಅಧ್ಯಕ್ಷ ಅಭ್ಯರ್ಥಿ ಅನಿತಾ ಪೂವಯ್ಯ ಹಾಗೂ ಕಾಂಗ್ರೆಸ್‍ನ ಉಪಾಧ್ಯಕ್ಷ ಅಭ್ಯರ್ಥಿ ಪ್ರಕಾಶ್ ಆಚಾರ್ಯ ಅವಕಾಶ ವಂಚಿತರಾದರು.

ಕುತೂಹಲ ಕೆರಳಿಸಿದ ಚುನಾವಣೆ

ಮಡಿಕೇರಿ ನಗರಸಭೆಯ ಎರಡನೆಯ ಅವಧಿಯ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದು, ಅಧ್ಯಕÀ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿತ್ತು. 23 ನಗರಸಭಾ ಸದಸ್ಯರು, ಓರ್ವರು ಸಂಸದರು, ಓರ್ವ ಶಾಸಕ, ಇಬ್ಬರು ಎಂಎಲ್‍ಸಿಗಳು ಸೇರಿ ಒಟ್ಟು 27 ಮಂದಿಗೆ ಮತದ ಹಕ್ಕಿತ್ತು.

ಇದರಲ್ಲಿ ಕಾಂಗ್ರೆಸ್ 10 ಸದಸ್ಯರು, ಓರ್ವ ಎಂಎಲ್‍ಸಿ ಸೇರಿ 11 ಸ್ಥಾನದೊಂದಿಗೆ ಕಾಂಗ್ರೆಸ್‍ಗೆ ಬೆಂಬಲ ಘೋಷಿಸಿದ್ದ ಎಸ್‍ಡಿಪಿಐಯ 4 ಸದಸ್ಯರ ಸಹಕಾರದೊಂದಿಗೆ 15 ಮತದ ವಿಶ್ವಾಸ ಹೊಂದಿತ್ತು. ಬಿಜೆಪಿ 8 ಸದಸ್ಯರು, ಓರ್ವ ಸಂಸದರು, ಒಬ್ಬರು ಶಾಸಕರು ಹಾಗೂ ಒಬ್ಬರು ಎಂಎಲ್‍ಸಿಯನ್ನು ಹೊಂದಿದ್ದು, ಈ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಜೆಡಿಎಸ್‍ನ ಸದಸ್ಯೆ ಸಂಗೀತಾ ಪ್ರಸನ್ನ ಅವರ ಬೆಂಬಲದೊಂದಿಗೆ 12 ಸ್ಥಾನ ಹೊಂದಿದ್ದು, ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಗೈರು ಹಾಜರಾಗಿದ್ದರಿಂದ ಏನಾಗಬಹುದು ಎಂಬ ಕುತೂಹಲ ಗರಿಗೆದರಿತ್ತು.