ಗೋಣಿಕೊಪ್ಪಲು, ಆ. 28: ಭಾರತದ ಸಂವಿಧಾನಕ್ಕೆ ವಿರುದ್ಧವಾದ ಮತ್ತೊಂದು ಕಾನೂನಿಲ್ಲ. ಮಾನವನ ಮೂಲಭೂತ ಕರ್ತವ್ಯಗಳನ್ನು ಮೊದಲು ತಿಳಿದುಕೊಂಡಿರಬೇಕು. ಬಾಲ್ಯ, ಯವ್ವನ ಹಾಗೂ ಪ್ರೌಢಾವಸ್ಥೆಯಲ್ಲಿನ ವರ್ತನೆ ಬಗ್ಗೆ ಸ್ಪಷ್ಟ ಅರಿವು ಅಗತ್ಯ. ಹುಟ್ಟು-ಸಾವಿನ ನಡುವಿನ ಜೀವನ ಕಾನೂನು ಬದ್ಧವಾಗಿರಬೇಕು. ಉತ್ಕøಷ್ಟ ಜೀವನದೊಂದಿಗೆ ದೇಶದ ಪ್ರಗತಿಗೆ ಪ್ರತಿಯೊಬ್ಬ ಭಾರತೀಯನೂ ಶ್ರಮಿಸಬೇಕಾಗಿದೆ ಎಂದು ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ನುಡಿದರು.ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ವಿಚಾರ ವಿನಿಮಯ ಕಾರ್ಯಕ್ರಮದ ಪ್ರಜ್ಞಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಾಜಪೇಟೆ ವಕೀಲರ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಡಿಕೇರಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾವೇರಿ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಇದೇ ಸಂದರ್ಭ ಕಾನೂನು ಅರಿವು ಕಾರ್ಯಕ್ರಮ ಜರುಗಿತು.

ಆರ್ಥಿಕವಾಗಿ ದುರ್ಬಲವಾಗಿದ್ದವರಿಗೆ, ರೂ. 1 ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರ ಸಹಾಯ ಹಸ್ತ ನೀಡುತ್ತಾ ಬಂದಿದೆ. ಹಿರಿಯರನ್ನು, ಶಿಕ್ಷಕರನ್ನು, ಮಹಿಳೆಯರನ್ನು ಗೌರವದಿಂದ ಕಾಣುವಂತಾಗಬೇಕು. ಮೋಟಾರು ವಾಹನ ಕಾಯ್ದೆಯನ್ನು ತಪ್ಪದೆ ಅನುಸರಿಸುವಂತಾಗಬೇಕು ಎಂದು ನ್ಯಾಯಾಧೀಶ ಮೋಹನ್ ಪ್ರಭು ಮಾಹಿತಿ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೀರಾಜಪೇಟೆ ವಕೀಲೆ ಅನುಪಮಾ ಕಿಶೋರ್, ಮಗು ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗಲೇ ಕಾನೂನು ಕಟ್ಟಲೆಗಳು ಆರಂಭವಾಗುತ್ತದೆ. ಮಗು ಹೆಣ್ಣು ಅಥವಾ ಗಂಡು ಎಂದು ಭ್ರೂಣಾವಸ್ಥೆಯಲ್ಲಿ ಲಿಂಗ ಪತ್ತೆ ಹಚ್ಚುವದು ಕಾನೂನು ಬಾಹಿರ. ಹೆಣ್ಣು ಎಂದು ತಿಳಿದೊಡನೆ ಭ್ರೂಣ ಹತ್ಯೆ ಮಾಡುವದೂ ಕಾನೂನು ಬಾಹಿರ. ಜನನ ನಂತರ ನೋಂದಾವಣೆ ಕಡ್ಡಾಯ. ಇಲ್ಲವೇ ಮುಂದೆ ಜನನ ಪ್ರಮಾಣ ಪತ್ರಕ್ಕೆ ನ್ಯಾಯಾಲಯ ಮೆಟ್ಟಿಲು ಏರಬೇಕಾಗುತ್ತದೆ. ವಿದ್ಯಾಭ್ಯಾಸ, ಉದ್ಯೋಗ, ವಿದೇಶ ಪ್ರಯಾಣಕ್ಕೆ ಜನನ ಪ್ರಮಾಣ ಪತ್ರ ಖಡ್ಡಾಯ ಎಂದು ಹೇಳಿದರು.

ಕಾವೇರಿ ಕಾಲೇಜು ಪ್ರಾಂಶುಪಾಲ ಪಿ.ಎ. ಪೂವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವದು ಉತ್ತಮ ಕಾರ್ಯಕ್ರಮವಾಗಿದ್ದು, ಈ ನೆಲದ ಕಾನೂನು ಎಲ್ಲರಿಗೂ ತಿಳಿದಿರಬೇಕು ಹಾಗೂ ಗೌರವಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾವೇರಿ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೆÇ್ರ. ಎಂ.ಡಿ. ಅಕ್ಕಮ್ಮ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕಿ ಕಾವ್ಯ ಉಪಸ್ಥಿತರಿದ್ದರು. ಪ್ರಾರ್ಥನೆ ಸವಿತಾ ಮತ್ತು ತಂಡ, ಸ್ವಾಗತ ಪೆÇ್ರ. ಅಕ್ಕಮ್ಮ ಹಾಗೂ ಸವಿತಾ ವಂದನಾರ್ಪಣೆ ಮಾಡಿದರು.