ಮಡಿಕೇರಿ, ಆ. 27: ಕಾರ್ಮಿಕರ ಪ್ರಮುಖ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.2 ರಂದು ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಜಂಟಿ ಕ್ರಿಯಾ ಸಮಿತಿಯ ಅಖಿಲ ಭಾರತ ಮುಷ್ಕರಕ್ಕೆ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಸಂಘ ಬೆಂಬಲ ವ್ಯಕ್ತಪಡಿಸಿದೆ. ಸಿಬ್ಬಂದಿಗಳು ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಪಿ.ಆರ್.ಭರತ್ ಹಾಗೂ ಕಾರ್ಯದರ್ಶಿ ಹೆಚ್. ಜಾನಕಿ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಾಗಿ ದುಡಿಯುತ್ತಿರುವ ನೂರಾರು ಕಾರ್ಮಿಕರು ಹಲವು ಮೂಲಭೂತ ಸಮಸ್ಯೆಗಳಿಂದ ವಂಚಿತರಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಮಾಸಿಕ ರೂ. 18 ಸಾವಿರ ವೇತನ ನೀಡಬೇಕು. ಗುತ್ತಿಗೆ ಆಧಾರವನ್ನು ಕೈ ಬಿಡುವದರೊಂದಿಗೆ ವೇತನವನ್ನು ಆಸ್ಪತ್ರೆಯ ಮೂಲಕವೇ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಒದಗಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಇರಬೇಕಾದ ‘ಡಿ’ ಗ್ರೂಪ್ ನೌಕರರನ್ನು ಜನಸಂಖ್ಯೆಗೆ ಅನುಗುಣವಾಗಿ ನೇಮಿಸಬೇಕು. ಇಲ್ಲದಿದ್ದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ವೇತನವನ್ನು 2 ಪಟ್ಟು ಹೆಚ್ಚಿಸಬೇಕು, ವರ್ಷಕ್ಕೆ 2 ಜೊತೆ ಸಮವಸ್ತ್ರ, ಗ್ಲೌಸ್, ರೈನ್ ಕೋಟ್, ಶೂ, ಇನ್ನಿತರ ಸಾಮಗ್ರಿಗಳನ್ನು ನೀಡಬೇಕು. ಪಿ.ಎಫ್. ಹಣವನ್ನು ಪಾವತಿಸದೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕೊಡಗು ಜಿಲ್ಲೆಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳನ್ನು ‘ಡಿ’ ಗ್ರೂಪ್ ನೌಕರರೆಂದು ಪರಿಗಣಿಸಿ ಖಾಯಂಗೊಳಿಸಬೇಕೆಂದು ಸೆ.2 ರಂದು ನಡೆಯುವ ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವದೆಂದು ತಿಳಿಸಿದ್ದಾರೆ.