ವೀರಾಜಪೇಟೆ, ಜೂ. 26: ಸಾಮರಸ್ಯ ಮತ್ತು ಸೌಹಾರ್ದತೆಗೆ ಸೀಮಿತ ಗಡಿಗಳಿಲ್ಲ, ಎಲ್ಲಾ ವರ್ಗದವರು ಮೂಲಭೂತವಾಗಿ ಸೌಹಾರ್ದಯುತವನ್ನೇ ಬಯಸುತ್ತಾರೆ. ಸಮಾಜದ ಸಾಮರಸ್ಯ, ನಿಜವಾದ ಸುಖ, ನೆಮ್ಮದಿ, ಸಂತೋಷದ ತಾಣವಾಗಿದೆ ಎಂದು ಡಾ. ಎಂ.ಸಿ. ಕಾರ್ಯಪ್ಪ ಹೇಳಿದರು.

ವೀರಾಜಪೇಟೆಯ ಗಣಪತಿ ಆರ್ಕೆಡ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮತ್ತು ಸದ್ಭಾವನಾ ಮಂಚ್ ವತಿಯಿಂದ ನಡೆದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಂಗಳೂರಿನ ಅಬ್ದುಲ್ ಹಸೀಬ್ ಮಾತನಾಡಿ, ಎಲ್ಲಾ ಧರ್ಮಗಳೂ ಸೌಹಾರ್ದತೆಯನ್ನು ಸಾರುತ್ತವೆ. ಮನುಷ್ಯನು ತನ್ನ ಅಸ್ತಿತ್ವದ ಬಗ್ಗೆ ತಿಳಿದು ಸೃಷ್ಟಿಕರ್ತನಿಗೆ ಶರಣಾದಲ್ಲಿ ನೈಜ ದಾಸನಾಗುತ್ತಾನೆ. ಧರ್ಮಗಳು ನಿಗೂಢತೆಗಳನ್ನು ಮುಕ್ತವಾಗಿ ಬಹಿರಂಗಗೊಳಿಸಿದರೆÀ ಮನುಷ್ಯನಲ್ಲಿರುವ ಸಂಕುಚಿತತೆ ಕಡಿಮೆಯಾಗುತ್ತದೆ. ಇದರಿಂದ ಧರ್ಮಗಳ ಸೌಹಾರ್ದತೆಗೆ ಪರಸ್ಪರ ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಕೆ.ಪಿ.ಕೆ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದ್ಭಾವನಾ ಮಂಚ್ ಕಾರ್ಯಾಧ್ಯಕ್ಷ ಎ.ಎನ್. ರವಿ ಉತ್ತಪ್ಪ , ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಧೋಷ್ ಪೂವಯ್ಯ, ನಿವೃತ್ತ ಶಿಕ್ಷಕ ಪಿ.ಎ. ಲಕ್ಷ್ಮಿ ನಾರಾಯಣ ಮಾತನಾಡಿದರು.

ಬಿ.ಜೆ.ಪಿ. ಅಲ್ಪಸಂಖ್ಯಾತ ಘಟಕದ ಜೋಕಿಂ ರೋಡ್ರಿಗಸ್, ವಕೀಲರ ಸಂಘದ ಅಧ್ಯಕ್ಷ ಎನ್. ಗೋಪಾಲ ಕೃಷ್ಣ ಕಾಮತ್, ಕೊಡವ ಮುಸ್ಲಿಂ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಿ.ಹೆಚ್. ಸೂಫಿ ಹಾಜಿ, ಉದ್ಯಮಿ ಎ.ಸಿ. ಚೋಪಿ ಜೋಸೆಫ್, ಕೆ.ಪಿ. ರಶೀದ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನೀಮ್ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನೀತ, ನವಾಯತ್ ಜಮಾಅತ್‍ನ ಅಧ್ಯಕ್ಷ ದಿಲ್‍ದಾರ್ ಬಾಷ, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ ಪಾಲ್ಗೊಂಡಿದ್ದರು. ಸದ್ಭಾವನಾ ಮಂಚ್ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್ ಸ್ವಾಗತಿಸಿ, ವಂದಿಸಿದರು.