ಮಡಿಕೇರಿ, ಜ.28 : ಕಾವೇರಿ ನದಿ ಕಲುಷಿತಗೊಳ್ಳುವದನ್ನು ತಡೆಯಲು ಆದ್ಯತೆಯ ಮೇರೆಗೆ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಭಾಗಮಂಡಲ ಗ್ರಾ.ಪಂ. ಗೆ ಸರಕಾರ ವಿಶೇಷ ಅನುದಾನ ಒದಗಿಸಬೇಕೆಂದು ಒತ್ತಾಯಿಸಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ತಾ.30 ರಂದು ನದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿದೆ ಎಂದು ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ರಾಷ್ಟ್ರೀಯ ಶುಚಿತ್ವ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಭಾಗಮಂಡಲ ಗ್ರಾ.ಪಂ. ಆಡಳಿತ ಮಂಡಳಿಯ ಸಹಯೋಗದೊಂದಿಗೆ ಸೋಮವಾರ ಭಾಗಮಂಡಲದಲ್ಲಿ ನದಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗುವದು ಎಂದರು.

ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಧಾರ್ಮಿಕ ಕೇಂದ್ರಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗು ವದೆಂದು ತಿಳಿಸಿದರು.

ನೂರಕ್ಕೂ ಅಧಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾವೇರಿ ನದಿ ತಟದ 24 ಗ್ರಾ.ಪಂ ವ್ಯಾಪ್ತಿಯಲ್ಲಿ ನಿರಂತರ ನೂರು ದಿನಗಳ ಕಾಲ ಸ್ವಚ್ಛತಾ ಆಂದೋಲನ ನಡೆಯಲಿದೆ. ಆ ಮೂಲಕ ನದಿ ಪಾತ್ರದ ಜನರ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆಯಲಾಗುವದು. ನಂತರ ಕಾವೇರಿ ನದಿ ಸ್ವಚ್ಛತೆಗಾಗಿ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲು ನಿಯೋಗ ತೆರಳಲಾಗುವದೆಂದು ಚಂದ್ರಮೋಹನ್ ತಿಳಿಸಿದರು.

ಪ್ರತಿ ಮಳೆಗಾಲದಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡು ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ನದಿಯ ಹೂಳೆತ್ತುವ ಮೂಲಕ ನದಿ ಪ್ರದೇಶವನ್ನು ಅಗಲೀಕರಣಗೊಳಿಸಿ ತಡೆಗೋಡೆ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ವಿಶೇಷ ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲೆಯ 24 ಗ್ರಾ.ಪಂ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ನೇರವಾಗಿ ಕಾವೇರಿ ನದಿ ನೀರನ್ನು ಸೇರುತ್ತಿದ್ದು, ನದಿಯ ಪಾವಿತ್ರ್ಯತೆ ಕಾಪಾಡಲು ಸರಕಾರ ಶಾಶ್ವತ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸುವದಾಗಿ ತಿಳಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ರೀನಾಪ್ರಕಾಶ್ ಮಾತನಾಡಿ ಕಾವೇರಿ ನದಿ ಸ್ವಚ್ಛತೆಗಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಬಜೆಟ್‍ಗೂ ಮೊದಲು ಸರಕಾರದ ಬಳಿಗೆ ನಿಯೋಗ ತೆರಳಿ ಶಾಶ್ವತ ಯೋಜನೆಗಾಗಿ ಒತ್ತಾಯಿಸಲಾಗುವದೆಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಕಾವೇರಿ ನದಿ ನೀರು ಕಲುಷಿತ ಗೊಂಡಿರುವದರಿಂದ “ಸಿ”ಗ್ರೇಡ್ ಪಡೆದುಕೊಂಡಿದೆ. ತ್ಯಾಜ್ಯಗಳು ತುಂಬಿಕೊಂಡಿರುವ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಬಂದೊದಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಜನರು ಮೊದಲು ಜಾಗೃತರಾಗ ಬೇಕೆಂದು ರೀನಾ ಪ್ರಕಾಶ್ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಿ.ಆರ್. ಸೋಮಶೇಖರ್, ಬಿ.ಡಿ.ಅಣ್ಣಯ್ಯ ಹಾಗೂ ಆಶಾಸುಬ್ಬಯ್ಯ ಉಪಸ್ಥಿತರಿದ್ದರು.