*ಗೋಣಿಕೊಪ್ಪಲು, ಆ. 22 : ಬೈಕ್ ಮತ್ತು ಜೀಪ್ ನಡುವೆ ನಡುವಿನ ಅಪಘಾತ ಸಂಭವಿಸಿ ಬೈಕಿನ ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ತಿತಿಮತಿಯಲ್ಲಿ ನಡೆದಿದೆ.

ತಿತಿಮತಿ ದೇವಮಚ್ಚಿ ನಿವಾಸಿ ಜಯರಾಜ್(22) ಮೃತಪಟ್ಟ ಯುವಕನಾಗಿದ್ದಾನೆ. ಸ್ಥಳೀಯ ಫೋಟೋ ಸ್ಟುಡೀಯೋದಲ್ಲಿ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಯರಾಜ್ ಭಾನುವಾರ ಸಂಜೆ ಮನೆಯಿಂದ ಸ್ಟುಡೀಯೋಗೆ ಕಾರ್ಯನಿಮಿತ್ತ ಆಗಮಿಸುತ್ತಿದ್ದ ಸಂದರ್ಭ ತಿತಿಮತಿ - ಗೋಣಿಕೊಪ್ಪಲು ರಸ್ತೆ ಮಧ್ಯೆ ಭದ್ರಗೊಳದಲ್ಲಿ ಎದುರಿಗೆ ಬಂದ ಜೀಪ್ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಜಯರಾಜ್‍ನ ಕತ್ತು ಮತ್ತು ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ಬೈಕ್ ಚಾಲನೆ ಮಾಡುತ್ತಿದ್ದ ಪಿರಿಯಾಪಟ್ಟಣದ ಕಿತ್ತೂರು ನಿವಾಸಿ ಯತೀಶ್ ಅವರ ಎರಡು ಕಾಲು ಹಾಗೂ ಕೈಗಳ ಮೂಳೆಗಳು ಮುರಿದಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆÉ. ಇವರು ತಿತಿಮತಿಯಲ್ಲಿ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾನುವಾರ ವೀರಾಜಪೇಟೆಯಲ್ಲಿ ಮದುವೆ ಸಮಾರಂಭದಲ್ಲಿ ಛಾಯಾಚಿತ್ರ ತೆಗೆದು ಮನೆಗೆ ಹಿಂದಿರುಗಿದ ಜಯರಾಜ್ ಕರ್ತವ್ಯದ ಮೇಲೆ ಸಂಜೆ ಗೋಣಿಕೊಪ್ಪದಲ್ಲಿನ ಸ್ಟುಡೀಯೋಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ. ಈ ಸಂಧರ್ಭ ಗೋಣಿಕೊಪ್ಪಕ್ಕೆ ತೆರಳುವದಾಗಿ ಆಗಮಿಸಿದ ಸ್ನೇಹಿತ ಯತೀಶ್ ಜಯರಾಜ್‍ನನ್ನು ಕಂಡು ಬೈಕ್‍ನಲ್ಲಿ ಕರೆದೊಯ್ದಿದ್ದಾನೆ. ಭದ್ರಗೊಳದಲ್ಲಿ ಗೋಣಿಕೊಪ್ಪದಿಂದ ಅತೀ ವೇಗದಿಂದ ಬಂದ ಜೀಪು ಬೈಕಿಗೆ ಡಿಕ್ಕಿ ಹೊಡೆದಿದೆ.

ಮಾನವೀಯತೆ ಮರೆತ ಜೀಪ್ ಚಾಲಕ: ಬೈಕಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ರಸ್ತೆ ಬದಿಯಲ್ಲೇ ಬಿದ್ದಿದ್ದರೆ ಅವರ ರಕ್ಷಣೆಗೆ ಧಾವಿಸದ ಜೀಪ್ ಚಾಲಕ ಸ್ಥಳದಲ್ಲೇ ಜೀಪನ್ನು ಬಿಟ್ಟು ಪರಾರಿಯಾಗಿದ್ದಾನೆ. ಜೀಪ್ ಚಾಲಕ ತಿತಿಮತಿ ನಿವಾಸಿ ಯಾಗಿದ್ದು, ಗೋಣಿಕೊಪ್ಪದಿಂದ ತಿತಿಮತಿಗೆ ಆಗಮಿಸುವ ಸಂದರ್ಭ ಚಾಲಕ ಪಾನಮತ್ತನಾಗಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಪಘಾತ ನಡೆದ ಕ್ಷಣದಲ್ಲೆ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದ್ದರೆ ಜಯರಾಜ್‍ನ ಜೀವ ಉಳಿಸಬಹುದಾಗಿತ್ತು. ಅಪಘಾತ ನಡೆದು 1 ಗಂಟೆಗಳು ಸರಿದರೂ ಮೃತ ಜಯರಾಜ್ ಮತ್ತು ಸ್ನೇಹಿತ ಯತೀಶ್‍ನನ್ನು ಆಸ್ಪತ್ರೆಗೆ ಸಾಗಿಸಿರಲಿಲ್ಲ. ಕೊನೆಗೆ ಆಟೋ ಚಾಲಕರೊಬ್ಬರು ಮಾನವೀಯತೆ ಯಿಂದ ಗೋಣಿಕೊಪ್ಪ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಮೈಸೂರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಸ್ತೆ ಮಧ್ಯದಲ್ಲೇ ಜಯರಾಜ್ ಕೊನೆಯುಸಿರೆಳೆದಿದ್ದಾನೆ.

ಮಗನಿಗೆ ಅಪಘಾತವಾಗಿದೆ ಎಂದು ತಿಳಿದ ತಾಯಿ ಆರೋಗ್ಯ ಮೇರಿ ಪ್ರಜ್ಞೆ ತಪ್ಪಿದ್ದರು. ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಕೆ.ಜಿ. ಬೋಪಯ್ಯ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಂತಾಪ : ಮಡಿಕೇರಿ ತಾಲೂಕು ಮಂಜಿನ ನಗರಿ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಅಕಾಲಿಕ ದುರ್ಮರಣಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

-ಎನ್.ಎನ್. ದಿನೇಶ್