ಸೋಮವಾರಪೇಟೆ, ಜು. 5: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್‍ನಿಂದ ಇಲ್ಲಿನ ಆಲೋಕ ಸಭಾಂಗಣ ಮತ್ತು ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸುದರ್ಶನ ಕ್ರಿಯಾ ಯೋಗ ತರಬೇತಿ ಶಿಬಿರ ಮುಕ್ತಾಯಗೊಂಡಿತು.
ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಶಿಬಿರಾರ್ಥಿಗಳು ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ ಸೇರಿದಂತೆ ಇತರ ಯೋಗ ಪ್ರಾಕಾರಗಳಲ್ಲಿ ಭಾಗವಹಿಸಿದ್ದರು.
ಆರ್ಟ್ ಆಫ್ ಲಿವಿಂಗ್‍ನ ಮಂಗಳೂರು ಶಿಕ್ಷಕರಾದ ಸುರೇಖಾ ಹೆಗ್ಡೆ ಅವರು ಯೋಗ ತರಬೇತಿ ನೀಡಿದರು.
ಸಂಸ್ಥೆಯ ಸಂಯೋಜಕರಾದ ರಾಗಿಣಿ ಮತ್ತು ವಿಜಯ್ ಅವರುಗಳು ಶಿಬಿರದ ಉಸ್ತುವಾರಿ ವಹಿಸಿದ್ದರು.
ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಇಂತಹ ಯೋಗ ಶಿಬಿರಗಳು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರಲ್ಲದೆ, ಪ್ರತಿಯೋರ್ವರೂ ಯೋಗ, ಧ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಒತ್ತಡ ರಹಿತ ಜೀವನ ನಡೆಸುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಕಳೆದ ಜೂ. 28 ರಿಂದ ಒಂದು ವಾರಗಳ ಕಾಲ ಪ್ರತಿದಿನ ಬೆಳಿಗ್ಗೆ 5.30 ರಿಂದ 7.30 ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೆ ಯೋಗ ಶಿಬಿರ ನಡೆಯಿತು.