ಮಡಿಕೇರಿ, ಡಿ. 19 : ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಜಿಲ್ಲೆಯಾದ್ಯಂತ ನಡೆದ ಸದಸ್ಯತ್ವ ಅಭಿಯಾನ ಸಮಾರೋಪ ಗೊಂಡಿತು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ಅವರ ಮಾರ್ಗದರ್ಶನದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಲಾಗಿದ್ದು, ಅಭಿಯಾನದ ಮೂಲಕ ಜಿಲ್ಲೆಯಲ್ಲಿ 8,536 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಯುವ ಘಟಕ ಹೇಳಿದೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟಿ.ಪಿ.ರಮೇಶ್ ಈಗಾಗಲೇ ಸದಸ್ಯತ್ವ ಪಡೆದುಕೊಂಡಿ ರುವವರಲ್ಲಿ 1,256 ಮಂದಿ ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಸದಸ್ಯತ್ವ ಅಭಿಯಾನ ಗುರಿ ಸಾಧಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಕಾರ್ಯಕರ್ತರನ್ನು ಅಭಿನಂದಿಸಿದರು. ಸಧ್ಯದಲ್ಲಿಯೇ ಗ್ರಾಮೀಣ ಭಾಗದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ವಿಸ್ತರಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲಾಗುವದೆಂದು ಟಿ.ಪಿ. ರಮೇಶ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಕೆದಂಬಾಡಿ ರಿಷಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರ ಮೈನಾ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್, ಪ್ರಮುಖರಾದ ಚೆಟ್ಟಿಮಾನಿ ಹ್ಯಾರಿಸ್, ಹಾಕತ್ತೂರಿನ ಖಾಲಿದ್, ಸಂಪಾಜೆ ಹನೀಫ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಪಕ್ಷದ ಚುನಾವಣಾ ಅಧಿಕಾರಿಗಳಾದ ತಮಿಳುನಾಡಿನ ಕಾಳಿದಾಸ್ ಹಾಗೂ ಜಗದೀಶ್ ಅವರುಗಳು ವೀಕ್ಷಕರಾಗಿ ಹಾಜರಿದ್ದರು.