ಮಡಿಕೇರಿ, ಜು. 15: ಜಿಲ್ಲೆಯ ಪ್ರವಾಸಿ ತಾಣ ಮಾಂದಲ್‍ಪಟ್ಟಿಗೆ ತೆರಳುವ ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಮಾಂದಲ್‍ಪಟ್ಟಿಗೆ ಆಗಾಗ ತೆರಳಿ ವಾಹನಗಳ ತಪಾಸಣೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಂದಲ್‍ಪಟ್ಟಿಯಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುವದರ ಜೊತೆಗೆ ವಾಹನಗಳನ್ನು ವೇಗವಾಗಿ ಚಾಲಿಸಿ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ ಎಂಬ ಬಗ್ಗೆಯೂ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ವಾಹನ ನಿಲುಗಡೆ ಸ್ಥಳದಲ್ಲಿ ಇಬ್ಬರು ಸಮವಸ್ತ್ರ ಕಾವಲುಗಾರರನ್ನು ತಕ್ಷಣವೇ ನೇಮಕ ಮಾಡಬೇಕು. ಈ ಬಗ್ಗೆ ಗಮನಹರಿಸುವಂತೆ ಗಾಳಿಬೀಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಮಾಂದಲ್‍ಪಟ್ಟಿ ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿ.ಪಂ. ಇಂಜಿನಿಯರ್‍ಗೆ ಸೂಚನೆ ನೀಡಿದರು. ಮಾಂದಲ್‍ಪಟ್ಟಿ ರಸ್ತೆ ನೋಡಿದರೆ ಇಲ್ಲಿನ ವ್ಯವಸ್ಥೆ ಬಗ್ಗೆ ಪ್ರವಾಸಿಗರಿಗೆ ಗೊತ್ತಾಗುತ್ತದೆ. ಮಾಂದಲ್‍ಪಟ್ಟಿಯಲ್ಲಿ ಕನಿಷ್ಟ ಮೂಲ ಸೌಲಭ್ಯ ಕಲ್ಪಿಸುವದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಗಮನ ಹರಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಸಿ. ಜಗನ್ನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯ, ಜಿ.ಪಂ. ಕಾರ್ಯಪಾಲಕ ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ಎಇಇ ನಾಯಿಕೋಡ್ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಇಂಜಿನಿಯರ್ ಅಶೋಕ್ ರೆಡ್ಡಿ, ಗಾಳಿಬೀಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಲವು ಮಾಹಿತಿ ನೀಡಿದರು.